×
Ad

ಬೆಳ್ತಂಗಡಿ | ಅನುಮತಿಯಿಲ್ಲದೆ ಅಕ್ರಮ ಕೂಟ ಸೇರಿದ ಆರೋಪ: ಸೌಜನ್ಯಾ ತಾಯಿ ಸಹಿತ 20ಕ್ಕೂ ಅಧಿಕ ಮಂದಿಯ ವಿರುದ್ಧ ಎಫ್ಐಆರ್

Update: 2025-10-29 09:52 IST

ಬೆಳ್ತಂಗಡಿ: ಸೌಜನ್ಯಾ ಪರ ಹೋರಾಟಗಾರರ ವಿರುದ್ಧ ಪೊಲೀಸರು ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಆರೋಪಿಸಿ ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸುವ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದರೂ ಅ.27ರಂದು ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ಅಕ್ರಮ ಕೂಟ ಸೇರಿ ಸಾರ್ವಜನಿಕರಿಗೆ ತೊಂದರೆಯುಂಟು ಮಾಡಿದ ಆರೋಪದಲ್ಲಿ ಸೌಜನ್ಯಾ ಪರ ಹೋರಾಟಗಾರರು ಸೇರಿದಂತೆ 20ಕ್ಕೂ ಅಧಿಕ ಮಂದಿಯ ವಿರುದ್ಧ ಬೆಳ್ತಂಗಡಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸೌಜನ್ಯಾಳ ತಾಯಿ ಕುಸುಮಾವತಿ, ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಅನಿಲ್ ಕುಮಾರ್ ಅಂತರ, ಪ್ರಜ್ವಲ್ ಗೌಡ, ಪ್ರದೀಪ್ ಕುಲಾಲ್, ಶ್ರೀನಿವಾಸ ಗೌಡ, ರವೀಂದ್ರ ಶೆಟ್ಟಿ, ಪ್ರಸನ್ನ ರವಿ, ಉದಯ ಪ್ರಸಾದ್, ವೆಂಕಪ್ಪ ಕೋಟ್ಯಾನ್, ತನುಷ್ ಶೆಟ್ಟಿ, ಮೋಹನ್ ಶೆಟ್ಟಿ, ಜಯರಾಮ ಗೌಡ, ಸಂತೋಷ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಯೋಗೀಶ್ ಕುಲಾಲ್, ನಾರಾವಿ ವಿಜಯ, ರವೀಂದ್ರ ಶೆಟ್ಟಿ ಮುಡಿಪು, ಶಶಿಕಲಾ ಶೆಟ್ಟಿ, ಪೂಜಾಶ್ರೀ ಧರ್ಮಸ್ಥಳ, ಟಿಕ್ಕಿ ರವಿ ಹಾಗೂ ಇತರರ ವಿರುದ್ಧ ಬಿ.ಎನ್.ಎಸ್. 189(2), 190, 285, 57 ಕರ್ನಾಟಕ ಪೊಲೀಸ್ ಆಕ್ಟ್ 1963 31(o) 103(ii) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಘಟನೆ ಹಿನ್ನೆಲೆ: ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಸೌಜನ್ಯಾ ಪರ ಹೋರಾಟಗಾರರ ವಿರುದ್ದ ಪೊಲೀಸರು ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಆರೋಪಿಸಿ ಸೌಜನ್ಯಾ ಪರ ಹೋರಾಟಗಾರರು ಅ.27ರಂದು ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸುವ ಕಾರ್ಯಕ್ರಮ ಘೋಷಿಸಿದ್ದರು. ಆದರೆ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಆಗಿರುವ ಗಡಿಪಾರು ಆದೇಶದ ಬಗ್ಗೆ ಹೈಕೋರ್ಟ್ ನಲ್ಲಿ ವಿಚಾರಣೆ ನಡೆದು ತೀರ್ಪು ಬಾಕಿಯಿರುವ ಹಿನ್ನೆಲೆಯಲ್ಲಿ ಅನಿಲ್ ಕುಮಾರ್ ಅಂತರ ಅವರ ಮನವಿಯನ್ನು ತಿರಸ್ಕರಿಸಿ ಪ್ರತಿಭಟನೆ ನಡೆಸಲು/ ಮನವಿ ನೀಡಲು ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿತ್ತು. ಈ ಮಧ್ಯೆ ಅ.27ರಂದು ತಹಶೀಲ್ದಾರ್ ಗೆ ಮನವಿ ಸಲ್ಲಿಸಲು ಬಂದಿದ್ದವರನ್ನು ಪೊಲೀಸರು ತಡೆದಿದ್ದರು. ಇದು ಒಂದಿಷ್ಟು ಗೊಂದಲಗಳಿಗೂ ಕಾರಣವಾಗಿತ್ತು.

ಈ ಘಟನೆ ಬಗ್ಗೆ ಬೆಳ್ತಂಗಡಿ ಎಎಸ್ಸೈ ದುರ್ಗಾದಾಸ್ ದೂರು ನೀಡಿರುವ ದೂರಿನಂತೆ ಅನುಮತಿಯಿಲ್ಲದೆ ಪೊಲೀಸರ ಸೂಚನೆಯನ್ನು ನಿರ್ಲಕ್ಷಿಸಿ ಬೆಳ್ತಂಗಡಿ ಮಿನಿವಿಧಾನ ಸೌಧದ ರಸ್ತೆ ಹಾಗೂ ಮಿನಿ ವಿಧಾನ ಸೌಧದ ಎದುರು ಅಕ್ರಮ ಕೂಟ ಸೇರಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ ಆರೋಪಕ್ಕೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News