×
Ad

ಮಂಗಳೂರು | ಭರವಸೆಗೆ ಸೀಮಿತಗೊಂಡ ಎನ್‌ಐಟಿಕೆ ಕೇಂದ್ರೀಯ ವಿದ್ಯಾಲಯ!

Update: 2025-12-05 00:19 IST

ಮಂಗಳೂರು, ಡಿ.4: ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಕೇಂದ್ರೀಯ ವಿದ್ಯಾಲಯ ಆರಂಭಿಸುವುದಾಗಿ ಜನಪ್ರತಿನಿಧಿಗಳು ಭರವಸೆ ನೀಡಿ ಏಳೆಂಟು ವರ್ಷ ಕಳೆದಿದೆ. ಆದರೆ ಅದಿನ್ನೂ ಭರವಸೆಗೆ ಸೀಮಿತಗೊಂಡಿದೆ ಎಂದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಈಗಾಗಲೇ ಮಂಗಳೂರಿನ ಎಕ್ಕೂರು ಮತ್ತು ಪಣಂಬೂರಿನಲ್ಲಿ ಎರಡು ಕೇಂದ್ರೀಯ ವಿದ್ಯಾಲಯಗಳಿವೆ. ಮೂರನೇ ಕೇಂದ್ರೀಯ ವಿದ್ಯಾಲಯವನ್ನು ಸುರತ್ಕಲ್‌ನ ಎನ್‌ಐಟಿಕೆ ಕ್ಯಾಂಪಸ್‌ನೊಳಗೆ ಆರಂಭಿಸುವ ಬಗ್ಗೆ ಘೋಷಿಸಲಾಗಿತ್ತು. ಅಂದರೆ 2018ರಲ್ಲಿ ಕೇಂದ್ರದ ಶಿಕ್ಷಣ ಸಚಿವಾಲಯ (ಎಂಇ) ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್‌ಆರ್‌ಡಿ)ವು ಜಂಟಿಯಾಗಿ ಹಲವು ಕೇಂದ್ರೀಯ ವಿದ್ಯಾಲಯಗಳನ್ನು ಏಕಕಾಲದಲ್ಲಿ ಘೋಷಣೆ ಮಾಡಿತ್ತು. ಈ ವೇಳೆ ಮಂಗಳೂರಿಗೂ ಮೂರನೇ ಕೇಂದ್ರೀಯ ವಿದ್ಯಾಲಯ ಬರುತ್ತದೆ ಎಂಬ ಮಾಹಿತಿಯನ್ನು ಇಲಾಖೆ ನೀಡಿತ್ತು.

ಕೇಂದ್ರ ಶಿಕ್ಷಣ ಸಚಿವಾಲಯವು ಎನ್‌ಐಟಿಕೆಯ ನಿರ್ದೇಶಕರಿಗೆ ಎನ್‌ಐಟಿಕೆಯ ಕ್ಯಾಂಪಸ್‌ನಲ್ಲಿ ಐದು ಎಕರೆ ಜಾಗವನ್ನು ಕೇಂದ್ರೀಯ ವಿದ್ಯಾಲಯಕ್ಕೆ ಮೀಸಲಿಡಲು ಸೂಚನೆ ನೀಡಿತ್ತು. ಇದು ಕಾರ್ಯಗತಗೊಂಡಿದ್ದರೆ ಮೂಡುಬಿದಿರೆ, ಬೆಳ್ತಂಗಡಿ ಮತ್ತಿತರ ಪ್ರದೇಶಗಳ ಕೇಂದ್ರ ಸರಕಾರಿ ನೌಕರರ ಮಕ್ಕಳಿಗೆ ಹೆಚ್ಚಿನ ಸಹಾಯವಾಗುತ್ತಿತ್ತು ಎಂಬ ಮಾತು ಕೇಳಿ ಬಂದಿತ್ತು.

ಮಂಗಳೂರಿನಲ್ಲಿ ಮೂರನೇ ಕೇಂದ್ರೀಯ ಶಾಲೆಗೆ ಬೇಡಿಕೆ ಹೆಚ್ಚುತ್ತಿದೆ. ಪ್ರಸಕ್ತ ಇರುವ ಎರಡು ಕೇಂದ್ರೀಯ ಶಾಲೆಗಳಲ್ಲಿ ಹೆಚ್ಚುವರಿ ಮಕ್ಕಳ ಸೇರ್ಪಡೆಗೆ ಸಾಧ್ಯವಾಗುತ್ತಿಲ್ಲ.

ಈಗಾಗಲೇ ಎಕ್ಕೂರು ಹಾಗೂ ಪಣಂಬೂರಿನಲ್ಲಿ ಕೇಂದ್ರೀಯ ವಿದ್ಯಾಲಯಗಳಿವೆ. ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಅದಕ್ಕೆ ತಕ್ಕಂತೆ ಸೀಟುಗಳ ಏರಿಕೆ ಆಗುತ್ತಿಲ್ಲ. ಮೂರನೇ ಕೆವಿ ಬಂದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಈ ಬಗ್ಗೆ ಸಂಸದರು ಗಮನ ಹರಿಸಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News