×
Ad

ಅಕ್ರಮ ಮರಳುಗಾರಿಕೆ ಬಗ್ಗೆ ತೀವ್ರ ಚರ್ಚೆ: ಗಣಿ ಅಧಿಕಾರಿಗೆ ದ.ಕ. ಉಸ್ತುವಾರಿ ಸಚಿವರ ತರಾಟೆ

Update: 2025-02-17 20:05 IST

ಮಂಗಳೂರು: ದ.ಕ. ಜಿಲ್ಲೆಯಾದ್ಯಂತ ಅವ್ಯಾಹತವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ಅದನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವುದಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತರಾಟೆಗೈದ ಘಟನೆ ಸೋಮವಾರ ನಡೆಯಿತು.

ದ.ಕ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ ತ್ರೈಮಾಸಿಕ ಮುಂದುವರಿದ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಯಿಂದಾಗಿ ಸೇತುವೆಗಳ ಪಿಲ್ಲರ್‌ಗಳು ದುರ್ಬಲವಾಗುತ್ತಿವೆ. ಪೊಲೀಸರ ಮಾಹಿತಿಯಡಿಯಲ್ಲೇ ಈ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿದರು.

ಉಸ್ತುವಾರಿ ಸಚಿವರು ಈ ಬಗ್ಗೆ ಅಧಿಕಾರಿಗಳಿಂದ ವಿವರಣೆ ಕೇಳಿದಾಗ, ಪ್ರತಿಕ್ರಿಯಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಕೃಷ್ಣವೇಣಿ, ಪೊಲೀಸ್ ಇಲಾಖೆಯಿಂದ ಸರಿಯಾದ ಸಹಕಾರ ಸಿಗುತ್ತಿಲ್ಲ. ಸಿಬ್ಬಂದಿ ಕೊರತೆಯೂ ಇದೆ ಎಂದಾಗ ಅಸಮಾಧಾನಗೊಂಡ ಸಚಿವ ದಿನೇಶ್ ಗುಂಡೂರಾವ್, ನಿಮ್ಮ ಜವಾಬ್ಧಾರಿಯಿಂದ ನುಣುಚಿಕೊಳ್ಳಬೇಡಿ. ಸಿಆರ್‌ಝೆಡ್ ಪ್ರದೇಶದ ಮರಳು ಬೇಕಾಬಿಟ್ಟಿಯಾಗಿ ತೆಯಗೆಯಲಾಗುತ್ತಿದ್ದು, ಅದನ್ನು ನಿಯಂತ್ರಿಸಲು ವಿಫಲರಾಗಿದ್ದೀರಿ. ಹಾಗಾಗಿಯೇ ನಾನ್ ಸಿಆರ್‌ಝೆಡ್ ಪ್ರದೇಶ ಮರಳಿಗೆ ಬೇಡಿಕೆ ಇಲ್ಲವಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಹಿಂದೆ ನಡೆದ ಸಭೆಯ ನಡವಳಿಗೆ ಸಹಿ ಕೂಡಾ ಹಾಕಿಲ್ಲ ಎಂದು ಸಚಿವರು ಆಕ್ಷೇಪಿಸಿದರು.

ಈ ಕುರಿತು ಅಧಿಕಾರಿಗಳ ನಡುವೆ ಪರಸ್ಪರ ವಾಗ್ವಾದ ನಡೆದಾಗ ಪ್ರತಿಕ್ರಿಯಿಸಿದ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಅಕ್ರಮ ಮರಳುಗಾರಿಕೆ ನಿಯಂತ್ರಣ ತಡೆಯುವ ಕಾರ್ಯ ನಡೆಸಬೇಕಾಗಿರುವುದು ಗಣಿ ಮತ್ತು ಭೂವಿಜ್ಞಾನ ಇಲಾಖೆ. ಅವರು ಬಂದಿಲ್ಲ, ಇವರು ಮಾಡಿಲ್ಲ ಎಂದು ದೂರು ನೀಡುವ ಬದಲು ಮೊದಲು ಅಕ್ರಮ ಮರಳುಗಾರಿಕೆ ನಿಯಂತ್ರಣದ ಜವಾಬ್ದಾರಿ ಹೊಂದಿರುವ ಇಲಾಖೆಯ ಅಧಿಕಾರಿಯಾಗಿ ಜಿಲ್ಲಾಧಿಕಾರಿ ಸಭೆಯ ನಡಾವಳಿಗೆ ಸಹಿ ಹಾಕುವಂತೆ ತಾಕೀತು ಮಾಡಿದರು.

ಪೊಲೀಸರು ಕೂಡಾ ಅಕ್ರಮ ಮರಳುಗಾರಿಕೆ ಬಗ್ಗೆ ಸಕ್ರಿಯವಾಗಿ ಕಠಿಣ ಕ್ರಮ ವಹಿಸಬೇಕು ಎಂದು ಉಸ್ತುವಾರಿ ಸಚಿವರು ಸೂಚಿಸಿದಾಗ, ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಪ್ರತಿಕ್ರಿಯಿಸಿ, ಇಲಾಖೆಗೆ ಸಂಬಂಧಪಟ್ಟವರು ಸೂಕ್ತ ಮಾಹಿತಿ ನೀಡಿದರೆ, ಸಹಯೋಗ ನೀಡಲು ನಾವು ಸಿದ್ಧ ಎಂದರು. ಮರಳು ಸಾಗಾಟದ ವಾಹನ ವಶಪಡಿಸಿಕೊಂಡರೂ ಲೋಕ ಅದಾಲತ್‌ಗಳಲ್ಲಿ ಐದು ಸಾವಿರದಿಂದ 10 ಸಾವಿರ ದಂಡ ವಿಧಿಸಿ ಬಿಡಲಾಗುತ್ತಿದೆ ಎಂದರು.

ಬೆಳ್ತಂಗಡಿ ಶಾಸಕ ಹರೀಶ್ ಪುಂಜಾ ಪ್ರತಿಕ್ರಿಯಿಸಿ, ನಾನ್‌ಸಿಆರ್‌ಝೆಡ್ ವ್ಯಾಪ್ತಿಯ ಮರಳು ಬ್ಲಾಕ್ ಬ್ಲಾಕ್‌ಗಳ ವಿಲೇಯನ್ನು ಗ್ರಾ.ಪಂ.ಗಳಿಗೆ ಹಸ್ತಾಂತರಿಸಬೇಕು. ಇದರಿಂದ ಗ್ರಾಪಂಗೆ ಆದಾಯವೂ ಬರಲಿದೆ ಎಂದರು.

ರಾಷ್ಟ್ರೀಯ ಹಸಿರು ಪೀಠ (ಎನ್‌ಜಿಟಿ) ನಿರ್ದೇಶನದ ಮೇರೆಗೆ ಕಳೆದ ನಾಲ್ಕು ವರ್ಷಗಳಿಂದ ಸಿಆರ್‌ಝೆಡ್ ಪ್ರದೇಶಗಳಿಂದ ಮರಳು ತೆಗೆಯಲು ಸಾಧ್ಯವಾಗುತಿಲ್ಲ. ಸಾಂಪ್ರದಾಯಿಕ ವಿಧಾನ ಬಳಸಿ ಸಿಆರ್‌ಝೆಡ್‌ನ ಮರಳು ಬ್ಲಾಕ್‌ಗಳನ್ನು ತೆರವುಗೊಳಿಸಲು ಅನುಮತಿ ಕೋರಿ ರಾಜ್ಯ ಸಮಿತಿ ಈಗಾಗಲೇ ಸಿಆರ್‌ಝೆಡ್ ನಿಯಮಗಳನ್ನು ಕೇಂದ್ರಕ್ಕೆ ಕಳುಹಿಸಿದೆ. ಕೇಂದ್ರ ಸರಕಾರ ಸಿಆರ್‌ಝೆಡ್ ನಿಯಮಗಳ ಅಧಿಸೂಚನೆ ಹೊರಡಿಸಿದರೆ, ಮರಳು ತೆಗೆಯುವ ನಿರ್ಬಂಧ ಬಗೆಹರಿಯಲಿದೆ. ಕೇಂದ್ರದ ಅಧಿಸೂಚನೆಗೆ ಎದುರು ನೋಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.

ಬೇರೆ ರಾಜ್ಯಗಳಲ್ಲಿ ಸಿಆರ್‌ಝಡ್‌ನಲ್ಲಿ ಮರಳುಗಾರಿಕೆಗೆ ಅನುಮತಿಸಲಾಗಿದೆ. ಇಲ್ಲಿಗೆ ಯಾಕೆ ಸಾಧ್ಯವಾಗಿಲ್ಲ ಎಂದು ತಿಳಿದುಕೊಳ್ಳಿ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.

ನಾನ್ ಸಿಆರ್‌ಝೆಡ್‌ನಡಿ 27 ಮರಳು ಬ್ಲಾಕ್‌ಗಳಿದ್ದು, ಒಂಬತ್ತು ಬ್ಲಾಕ್‌ಗಳ ಗುತ್ತಿಗೆ ಅವಧಿ ಮುಗಿದಿದೆ. ಅಕ್ರಮ ಮರಳುಗಾರಿಕೆ ತಡೆಗೆ ಸಂಬಂಧಿಸಿ 60 ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಜಿಲ್ಲೆಯಲ್ಲಿ ಅತ್ರಮ ಮರಳುಗಾರಿಕೆಗೆ ಸಂಬಂಧಿಸಿ 107 ಪ್ರಕರಣ ದಾಖಲಿಸಿದ್ದು, 98 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಕ್ರಿಬೆಟ್ಟು ಅಣೆಕಟ್ಟೆಯಿಂದ ಕೃಷಿಭೂಮಿ ಮುಳುಗಡೆ

ಬಂಟ್ವಾಳದ ಜಕ್ರಿಬೆಟ್ಟುವಿನಲ್ಲಿ ನಿರ್ಮಿಸಲಾದ ಡ್ಯಾಂನಲ್ಲಿ 5.5 ಮೀಟರ್ ಬದಲಿಗೆ ಈ ಬಾರಿ 4.5 ಮೀಟರ್‌ಗೆ ನೀರು ನಿಲ್ಲಿಸಲಾಗಿದೆ. ಇದರಲ್ಲೇ ಬಂಟ್ವಾಳದ ಹಲವು ಎಕ್ರೆ ಕೃಷಿಭೂಮಿ ಜಲಾವೃತವಾಗಿದೆ ಎಂದು ಶಾಸಕ ರಾಜೇಶ್ ನಾಕ್ ಉಳಿಪಾಡಿ ಗಮನ ಸೆಳೆದರು. ಈ ಕುರಿತು ಕೃಷಿ ಅಧಿಕಾರಿಗಳಿಗೂ ಯಾವುದೇ ಮಾಹಿತಿ ಇಲ್ಲದ ಕಾರಣ ಸ್ಥಳಕ್ಕೆ ಭೇಟಿ ನೀಡುವಂತೆ ಹಾಗೂ ಎರಡು ದಿನದೊಳಗೆ ವರದಿ ನೀಡುವಂತೆ ಸಚಿವರು ಸೂಚಿಸಿದರು.

ವಸತಿ ನಿಲಯಗಳಲ್ಲಿ ಚರ್ಮರೋಗ ತಜ್ಞರಿಂದ ತಪಾಸಣೆಗೆ ಸಲಹೆ

ಜಿಲ್ಲೆಯ ವಿದ್ಯಾರ್ಥಿ ವಸತಿ ನಿಲಯಗಳಿಗೆ ಚರ್ಮರೋಗ ತಜ್ಞರಿಂದ ವರ್ಷಕ್ಕೆ ಕನಿಷ್ಟ ಎರಡು ಬಾರಿ ಶಿಬಿರದ ರೀತಿಯಲ್ಲಿ ತಪಾಸಣೆ ನಡೆಸುವ ಅಗತ್ಯವಿದೆ ಎಂದು ಸಭೆಯಲ್ಲಿ ಸಲಹೆ ನೀಡಿದ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಯುವಕರು, ವಿದ್ಯಾರ್ಥಿಗಳು ಡ್ರಗ್ಸ್ ಹಾವಳಿಗೆ ತುತ್ತಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ, ಕಾಲೇಜಿನ ಮಟ್ಟದಲ್ಲಿಯೇ ಮನಃಶಾಸ್ತ್ರಜ್ಞರಿಂದ ಕೌನ್ಸೆಲಿಂಗ್ ನೀಡಬೇಕು, ಇದನ್ನು ಜಿಲ್ಲೆಯಲ್ಲಿ ಪೈಲಟ್ ಪ್ರಾಜೆಕ್ಟ್ ಆಗಿ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News