×
Ad

ಕೋಟೆಕಾರು: ರಿಕ್ಷಾ ಚಲಾಯಿಸುತ್ತಿದ್ದ ವೇಳೆ ಹೃದಯಾಘಾತ; ಚಾಲಕ ಮೃತ್ಯು

Update: 2024-08-14 15:08 IST

ಉಳ್ಳಾಲ: ರಿಕ್ಷಾ ಚಲಾಯಿಸುತ್ತಿದ್ದ ವೇಳೆಯೇ ಚಾಲಕನು ಹೃದಯಾಘಾತದಿಂದ ಸಾವನ್ನಪ್ಪಿ ರಸ್ತೆಗೆಸೆಯಲ್ಪಟ್ಟಿದ್ದು,ಚಾಲಕನಿಲ್ಲದೆ ಮುಂದೆ ಚಲಿಸಿದ ರಿಕ್ಷಾವು ಆಟೋ ಪಾರ್ಕಿನ ಮತ್ತೊಂದು ರಿಕ್ಷಾಕ್ಕೆ  ಢಿಕ್ಕಿ ಹೊಡೆದು ನಿಂತ ಪರಿಣಾಮ ಪ್ರಯಾಣಿಕ ಮಹಿಳೆಯರಿಬ್ಬರು ಪವಾಡ ಸದೃಶ ಪಾರಾದ ಘಟನೆ ಕೋಟೆಕಾರಿನಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.

ಉಳ್ಳಾಲ ಧರ್ಮನಗರದ ನಿವಾಸಿ ಅಬ್ದುಲ್ ಮಜೀದ್ (44)ಹೃದಯಾಘಾತದಿಂದ ಮೃತಪಟ್ಟ  ರಿಕ್ಷಾ ಚಾಲಕ.

ಮಜೀದ್ ಮಂಗಳವಾರ ಮಧ್ಯಾಹ್ನ 12 ಗಂಟೆಯ ವೇಳೆ ಧರ್ಮನಗರದಿಂದ ಸಂಬಂಧಿಕರಾದ ಮಹಿಳೆಯರಿಬ್ಬರನ್ನು ತನ್ನ ಆಟೋ ರಿಕ್ಷಾದಲ್ಲಿ ಕುಳ್ಳಿರಿಸಿ ಒಂಭತ್ತುಕೆರೆ,ಸೋಮೇಶ್ವರ ಮಾರ್ಗವಾಗಿ ಕೋಟೆಕಾರು ಬೀರಿಗೆ ತೆರಳುತ್ತಿದ್ದ ವೇಳೆ ಕೋಟೆಕಾರು ಹೆದ್ದಾರಿ ಬಳಿ ಹೃದಯಾಘಾತವಾಗಿ ರಸ್ತೆಗೆಸೆಯಲ್ಪಟ್ಟಿದ್ದಾರೆ.ಚಾಲಕನಿಲ್ಲದ ಮುಂದೆ ಚಲಿಸಿದ ರಿಕ್ಷಾವು ಅದೃಷ್ಟವಶಾತ್ ಅಲ್ಲೇ ಇದ್ದ ಆಟೋ ಪಾರ್ಕಿನಲ್ಲಿ ನಿಂತಿದ್ದ ರಿಕ್ಷಾಕ್ಕೆ ಢಿಕ್ಕಿ ಹೊಡೆದು ನಿಂತಿದೆ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ. ಪ್ರಯಾಣಿಕ ಮಹಿಳೆಯರಲ್ಲಿ ಓರ್ವರು ಅನಾರೋಗ್ಯದಿಂದ ಬಳಲುತ್ತಿದ್ದು ಆಕೆಯನ್ನು ವೈದ್ಯರ ಕ್ಲಿನಿಕ್ ಗೆ ಬಿಡಲು ಮಜೀದ್ ತೆರಳಿದ್ದರು ಎಂದು ತಿಳಿದು ಬಂದಿದೆ.

ಮೃತ ಮಜೀದ್ ಅವರು ಶ್ರಮ ಜೀವಿಯಾಗಿದ್ದು, ಹಗಲಿರುಳು ರಿಕ್ಷಾ ಚಲಾಯಿಸಿ ಸಂಪಾದನೆ ಮಾಡಿ ಕುಟುಂಬಕ್ಕೆ ಆಧಾರವಾಗಿದ್ದರು. ಮೃತರು ಪತ್ನಿ,ಒಂದು ಗಂಡು,ಮತ್ತೊಂದು ಹೆಣ್ಣು ಮಗುವನ್ನು ಅಗಲಿದ್ದಾರೆ. ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News