ಕೋಟೆಕಾರ್ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ; ವಿವಿಧ ಇಲಾಖೆಗಳ ಸಮಸ್ಯೆ ಬಗ್ಗೆ ಚರ್ಚೆ
ಉಳ್ಳಾಲ: ವಿವಿಧ ಇಲಾಖೆಗಳ ಸಂಬಂಧಪಟ್ಟ ಪ್ರಮುಖ ಸಮಸ್ಯೆ ಗಳ ಬಗ್ಗೆ ವ್ಯಾಪಕ ಚರ್ಚೆ ಕೊಟೆಕಾರ್ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಕೋಟೆಕಾರ್ ಪಟ್ಟಣ ಪಂಚಾಯತ್ ಅಧ್ಯಕ್ಷ ದಿವ್ಯ ಸತೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೋಟೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಸರಿತಾ ಮಾತನಾಡಿ ಕೋಟೆಕಾರ್ ವ್ಯಾಪ್ತಿಯಲ್ಲಿ ಕೆಲವು ಕಡೆ ಸ್ವಚ್ಛತೆ ಕಡಿಮೆ ಇದ್ದು, ಡೆಂಗೆ, ಮಲೇರಿಯಾ ರೋಗ ಹರಡಲು ನಾವೇ ಅವಕಾಶ ಮಾಡಿ ಕೊಟ್ಟಂತಾಗಿದೆ. ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳ ಬಿಪಿ, ಶುಗರ್ ತಪಾಸಣೆ ಮಾಡಿದಾಗ ಕೆಲವರಲ್ಲಿ ಹೈ ಬಿಪಿ, ಶುಗರ್ ಪತ್ತೆ ಆಗಿದೆ. ಇದು ಹೃದ್ರೋಗಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಇದರ ನಿವಾರಣೆ ಆಗಬೇಕು. ಇದಕ್ಕಾಗಿ ಪಟ್ಟಣ ಪಂಚಾಯತ್ ಜಾಗದ ವ್ಯವಸ್ಥೆ ಮಾಡಿಕೊಟ್ಟರೆ ಎಲ್ಲರಿಗೂ ಎಲ್ಲಾ ರೀತಿಯ ವೈದ್ಯಕೀಯ ಚಿಕಿತ್ಸೆ ನೀಡಲು ಸಾಧ್ಯ ಆಗುತ್ತದೆ ಎಂದು ಹೇಳಿದರು.
ಸುಜಿತ್ ಮಾಡೂರು ಮಾತನಾಡಿ, ಕೋಟೆಕಾರ್ ನಲ್ಲಿ ಗುಜರಿ ಸಾಮಾನುಗಳು ಜಾಸ್ತಿ ಇವೆ. ಇದರಿಂದ ಕಸಗಳೂ ಜಾಸ್ತಿ ಆಗುತ್ತದೆ. ಇದಕ್ಕೆ ಅವಕಾಶ ನೀಡಬಾರದು. ಕೊಂಡಾಣ ದೈವಸ್ಥಾನ ಬಳಿ ನಮ್ಮ ಕ್ಲಿನಿಕ್ ಇದೆ ಇದು ಯಾರ ಉಪಯೋಗಕ್ಕೂ ಬರುತ್ತಿಲ್ಲ.ರೋಗಿಗಳು ಅಲ್ಲಿಗೆ ರಿಕ್ಷಾದಲ್ಲಿ ಹೋಗಿ ಬರಬೇಕು. ಇದರ ಬದಲು ಬೇರೊಂದು ಕಡೆ ವ್ಯವಸ್ಥೆ ಮಾಡಿ. ಅಂಗನವಾಡಿ ಕಾರ್ಯಕರ್ತೆಯರನ್ನು ಸೇರಿಸಿ ಮೆಡಿಕಲ್ ಕ್ಯಾಂಪ್ ಮಾಡಿದರೆ ಬಹಳಷ್ಟು ಜನರಿಗೆ ಅನುಕೂಲ ಆಗುತ್ತದೆ ಎಂದರು.
ಅಹ್ಮದ್ ಬಾವ ಮಾತನಾಡಿ, ಪ್ರಾಥಮಿಕ ಆರೋಗ್ಯ ಇಲಾಖೆ ಯ ಮೆಡಿಕಲ್ ಕ್ಯಾಂಪ್ ಉತ್ತಮ ಯೋಜನೆ. ಮೊದಲು ಪ.ಪಂ ಸದಸ್ಯರಿಗೆ ವ್ಯವಸ್ಥೆ ಮಾಡಬೇಕು.ಸಾರ್ವಜನಿಕವಾಗಿ ಮಾಡುವುದಾದರೆ ಬೇರೆ ವ್ಯವಸ್ಥೆ ಆಗಬೇಕಾಗಿದೆ ಎಂದರು.
ಕೌನ್ಸಿಲರ್ ಧೀರಜ್ ಮಾತನಾಡಿ, ಮರಣ ಹೊಂದಿದವರ ಮರಣ ಸರ್ಟಿಫಿಕೇಟ್ ನೀಡಲು ವಿಳಂಬ ಆಗದಂತೆ ನೋಡಬೇಕು.ಒಬ್ಬರು ಮೃತ ಪಟ್ಟರೆ ಎಂಬಿಬಿಎಸ್ ಕಲಿತ ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದನ್ನು ದೃಡೀಕರಿಸಬೇಕು. ಇದಕ್ಕೆ ಬೇಕಾದ ವ್ಯವಸ್ಥೆಯನ್ನು ಇಲಾಖೆ ಮಾಡಬೇಕು ಎಂದು ಆಗ್ರಹಿಸಿದರು. ಈ ವಿಚಾರದಲ್ಲಿ ವ್ಯಾಪಕ ಚರ್ಚೆ ನಡೆಯಿತು.
ಮೆಸ್ಕಾಮ್ ಎಇ ಮಾರಪ್ಪ ಮಾತನಾಡಿ ಕೋಟೆಕಾರ್ ವ್ಯಾಪ್ತಿಯಲ್ಲಿ ವಿದ್ಯುತ್ ಲೈನ್ ದುರಸ್ತಿ ಆಗುತ್ತಿದೆ. ಕೆಲವು ಕಡೆ ಲೋಪದೋಷಗಳು ಉಂಟಾಗಿವೆ. ನಮ್ಮಲ್ಲಿ ಇರುವುದು ಇಬ್ಬರೇ ಸಿಬ್ಬಂದಿ.ತಲಪಾಡಿವರೆಗಿನ ಲೈನ್ ದುರಸ್ತಿ ಆಗಬೇಕು. ಕೆಲವು ಕಡೆ ಮರಗಳು ಬೆಳೆದು ನಿಂತಿದ್ದು, ನೆರವಾಗಬೇಕು ಎಂದರು.
ಕೌನ್ಸಿಲರ್ ಅಹ್ಮದ್ ಬಾವ ಅಜ್ಜಿನಡ್ಕ ಮಾತನಾಡಿ, ಕೆಲವು ಕಡೆ ಮೆಸ್ಕಾಂ ಲೈನ್ ಸಮಸ್ಯೆ ಇದೆ.ಕೆಲವು ಬಾರಿ ಫ್ಯೂಸ್ ಹೋಗುವುದೂ ಇದೆ. ಇದನ್ನು ದುರಸ್ತಿ ಮಾಡಲು ವಿಳಂಬ ಆಗುತ್ತಿದೆ. ಅಲ್ಲದೇ ವಿದ್ಯುತ್ ಬಿಲ್ ಪಾವತಿ ಮಾಡಲು ಕೋಟೆಕಾರ್ ನಲ್ಲಿ ವ್ಯವಸ್ಥೆ ಆಗಬೇಕು. ಯಾವುದೇ ಕಚೇರಿಯಲ್ಲಿ ಬಿಲ್ ತೆಗೆದು ಕೊಳ್ಳುವುದಿಲ್ಲ. ಇದಕ್ಕೆ ಪರಿಹಾರ ವ್ಯವಸ್ಥೆ ಮಾಡಿ ಎಂದು ಆಗ್ರಹಿಸಿದರು.
ಕೌನ್ಸಿಲರ್ ಧೀರಜ್ ಮಾತನಾಡಿ, ಬಿಲ್ ಪಾವತಿ ಮಾಡದಿದ್ದರೆ ತಕ್ಷಣ ಸಂಪರ್ಕ ಕಡಿತ ಮಾಡುತ್ತೀರಿ. ಆದರೆ ವಿದ್ಯುತ್ ಲೈನ್ ಕಡಿದು ಹೋದರೆ ಯಾಕೆ ತಕ್ಷಣ ದುರಸ್ತಿ ಮಾಡುವುದಿಲ್ಲ ಎಂದು ಪ್ರಶ್ನಿಸಿದರು.
ಸುಜಿತ್ ಮಾಡೂರು ಮಾತನಾಡಿ, ರಾತ್ರಿ ಹೊತ್ತು ವಿದ್ಯುತ್ ಸಮಸ್ಯೆ ಜಾಸ್ತಿ ಆಗುತ್ತಿದೆ.ನಿಮಗೆ ಮಾಹಿತಿ ಕೊಟ್ಟರೆ ಸ್ಪಂದಿಸುವುದಿಲ್ಲ. ಸಿಬ್ಬಂದಿ ಕೊರತೆ ನಿಮ್ಮ ವೈಯಕ್ತಿಕ ಸಮಸ್ಯೆ. ಇಲ್ಲಿನ ಸಮಸ್ಯೆ ಇತ್ಯರ್ಥ ಆಗಬೇಕು ಎಂದರು.
ಟ್ರಾಫಿಕ್ ಎಎಸ್ಐ ಸಂತೋಷ್ ಮಾತನಾಡಿ, ಕೋಟೆಕಾರ್ ವ್ಯಾಪ್ತಿಯಲ್ಲಿ ಟ್ರಾಫಿಕ್ ಸಮಸ್ಯೆ ಇದೆ. ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನದಲ್ಲಿ ಹೋಗುವವರು ಇದ್ದಾರೆ. ಅವರನ್ನು ನಾವು ನಿಲ್ಲಿಸಲು ಹೋದರೆ ಸವಾರ ಒಟ್ಟಾರೆ ವಾಹನ ಕೊಂಡು ಹೋಗಿ ಅಪಾಯ ಆಗುವ ಸಾಧ್ಯತೆ ಇದೆ. ಈ ಕಾರಣಕ್ಕೆ ವಾಹನ ನಿಲ್ಲಿಸುವುದಿಲ್ಲ. ಕಾನೂನು ಉಲ್ಲಂಘಿಸಿದರೆ ಸಿಸಿ ಕೆಮರಾ ದಲ್ಲಿ ಪತ್ತೆ ಆಗುತ್ತದೆ. ನಂಬರ್ ಪ್ಲೇಟ್ ಇಲ್ಲದೇ ಹೋಗುವ ವಾಹನಗಳ ವಿರುದ್ಧ ಕ್ರಮ ಜರಗಿಸುತ್ತೇವೆ. ಕರ್ಕಶ ಹಾರ್ನ್ ಗಳನ್ನು ಕೂಡ ತೆಗೆಯುವ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿದರು.
ಸುಜಿತ್ ಮಾಡೂರು ಮಾತನಾಡಿ ಮದುವೆ ಸಮಾರಂಭದಲ್ಲಿ ವಾಹನ ಜಾಸ್ತಿ ಇರುತ್ತದೆ. ಇದರಿಂದ ಬ್ಲಾಕ್ ಕೂಡ ಆಗುತ್ತದೆ. ಇಲ್ಲಿ ಬ್ಲಾಕ್ ಆಗದಂತೆ ಕ್ರಮ ಆಗಬೇಕು ಎಂದರು.
ಗ್ರಾಮಕರಣಿಕ ನವ್ಯ ಮಾತನಾಡಿ, ಬೆಳೆ , ಕೃಷಿ, ನಿವೇಶನ ಕಂದಾಯ ಇಲಾಖೆಗೆ ಬರುತ್ತದೆ. ನಿವೇಶನ ಸಂಬಂಧ ಪಟ್ಟ ಅರ್ಜಿ ವಿಲೇವಾರಿ ಮಾಡಲಾಗುವುದು ಎಂದರು.
ಸುಜಿತ್ ಮಾಡೂರು ಮಾತನಾಡಿ, 2013 ರಲ್ಲಿ ನಿವೇಶನ ಕ್ಕಾಗಿ ಅರ್ಜಿ ಸಲ್ಲಿಸಿದ ನಿವೇಶನ ರಹಿತರು ಇದ್ದಾರೆ.2016 ರಲ್ಲು ಬಹಳಷ್ಟು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಯಾವುದು ಕೂಡ ವಿಲೇವಾರಿ ಆಗಿಲ್ಲ. ನಿವೇಶನ ರಹಿತರಿಗೆ ನಿವೇಶನ ಕೂಡ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮ ಕರಣಿಕ ನವ್ಯ ಸರ್ಕಾರಿ ಜಾಗ ಇದೆ. ನಿವೇಶನ ರಹಿತರಿಗೆ ಇದನ್ನು ಒದಗಿಸಲು ಹೋದರೆ ಆಕ್ಷೇಪ ಬರುತ್ತದೆ. ಕೆಲವು ಜಾಗದ ಸಮಸ್ಯೆ ಕೋರ್ಟ್ ನಲ್ಲಿ ಇದೆ. ಎಂದರು.
ಹರೀಶ್ ಮಾತನಾಡಿ, ನಿವೇಶನ ರಹಿತರಿಗೆ ನಿವೇಶನ ಬೇಕು. ಇದನ್ನು ಸರ್ವೇ ಮಾಡುವ ಜವಾಬ್ದಾರಿ ಅಧಿಕಾರಿಗಳದ್ದು, ಸರ್ವೇ ಮಾಡಿಸಿ ಅದಕ್ಕೆ ವ್ಯವಸ್ಥೆ ಮಾಡಿ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಇತ್ಯರ್ಥ ಪಡಿಸಬೇಕು ಹೊರತು ನಾವಲ್ಲ ಎಂದರು.
ಸಭೆಯಲ್ಲಿ ಮುಖ್ಯಾಧಿಕಾರಿ ಮಾಲಿನಿ, ಉಪಾಧ್ಯಕ್ಷ ಪ್ರವೀಣ್, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕುಮಾರ್ ಉಪಸ್ಥಿತರಿದ್ದರು.