ಮಂಗಳೂರು| ಅಪಘಾತದಲ್ಲಿ ಪಾದಚಾರಿ ಮೃತ್ಯು: ಆರೋಪಿ ಕಾರು ಚಾಲಕನಿಗೆ ಜೈಲುಶಿಕ್ಷೆ, ದಂಡ
ಮಂಗಳೂರು: ರಸ್ತೆ ಅಪಘಾತದಲ್ಲಿ ಪಾದಚಾರಿಯ ಸಾವಿಗೆ ಕಾರಣನಾಗಿದ್ದಲ್ಲದೆ ಪೊಲೀಸರಿಗೂ ಮಾಹಿತಿ ನೀಡದೆ ಸ್ಥಳದಿಂದ ಪರಾರಿಯಾಗಿದ್ದ ಆರೋಪಿ ಕಾರು ಚಾಲಕನಿಗೆ ನ್ಯಾಯಾಲಯ ಒಂದೂವರೆ ತಿಂಗಳ ಜೈಲು ಶಿಕ್ಷೆ ಹಾಗೂ 8 ಸಾವಿರ ರೂ. ದಂಡ ವಿಧಿಸಿದೆ.
2024ರ ಎ.28ರಂದು ಪೂ.11ಕ್ಕೆ ಕುಂಟಿಕಾನ ಬಳಿಯ ಬಾರೆಬೈಲು ಕ್ರಾಸ್ ಬಳಿ ರಾ.ಹೆ. 66ನ್ನು ತಪನ್ ಚೌಧರಿ (27) ಮತ್ತವರ ಸ್ನೇಹಿತ ದಾಟುತ್ತಿದ್ದ ವೇಳೆ ಕೆಪಿಟಿಯಿಂದ ಕೊಟ್ಟಾರ ಕಡೆಗೆ ವೇಗವಾಗಿ ಸಾಗಿ ಬಂದ ಕಾರು ತಪನ್‌ಗೆ ಢಿಕ್ಕಿ ಹೊಡೆದಿತ್ತು. ಇದರಿಂದ ಡಾಮರು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡ ತಪನ್‌ರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಅಪಘಾತಕ್ಕೆ ಕಾರಣನಾದ ಕಾರು ಚಾಲಕ ಗುರುಪ್ರಸಾದ್ ಎಂ.ಆರ್. ಆಸ್ಪತ್ರೆಗೆ ಸಾಗಿಸದೆ ಸ್ಥಳದಿಂದ ಕಾರಿನೊಂದಿಗೆ ಪರಾರಿಯಾಗಿದ್ದ. ಈ ಬಗ್ಗೆ ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ವೇಳೆ ಅಪಘಾತಕ್ಕೆ ಕಾರಣವಾದ ಕಾರಿಗೆ ವಾಯುಮಾಲಿನ್ಯ ದೃಢೀಕರಣ ಮಾಡಿಸಿರಲಿಲ್ಲ ಎಂದು ತಿಳಿದು ಬಂದಿತ್ತು. ಅದರಂತೆ ಆಗಿನ ಕದ್ರಿ ಠಾಣಾ ಪೊಲೀಸ್ ನಿರೀಕ್ಷಕ ಇ. ಆನಂದ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಜೆಎಂಎಫ್‌ಸಿ 8ನೇ ನ್ಯಾಯಾಲಯದ ನ್ಯಾಯಾಧೀಶ ಫವಾಝ್ ಪಿ.ಎ. ಅವರು ಆರೋಪಿ ಗುರುಪ್ರಸಾದ್‌ಗೆ ಒಂದೂವರೆ ತಿಂಗಳ ಜೈಲು ಶಿಕ್ಷೆ, 8 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಆರೋನ್ ಡಿಸೋಜ ವಿಟ್ಲ ವಾದ ಮಂಡಿಸಿದ್ದಾರೆ.