ಡಿ.12, 13 ರಂದು ಮಂಗಳೂರು ವಿವಿಯಲ್ಲಿ'ಸ್ವಾಸ್ಥ್ಯ ಸಂಪದ-2025' ರಾಷ್ಟ್ರೀಯ ಸಮ್ಮೇಳನ
ಕೊಣಾಜೆ: ಮಂಗಳೂರು ವಿಶ್ವ ವಿದ್ಯಾನಿಲಯದ ಸೂಕ್ಷ್ಮಾಣುಜೀವ ವಿಜ್ಞಾನ ವಿಭಾಗದ ವತಿಯಿಂದ ಆಳ್ವಾಸ್ ಪಾರಂಪರಿಕ ಔಷಧೀಯ ಸಂಶೋಧನಾ ಕೇಂದ್ರ, ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮೂಡುಬಿದಿರೆ ಇದರ ಸಹಯೋಗದೊಂದಿಗೆ 'ಸ್ವಾಸ್ಥ್ಯ ಸಂಪದ-2025' ಔಷಧೀಯ ಸಸ್ಯಗಳ ಬಗ್ಗೆ ರಾಷ್ಟ್ರೀಯ ಸಮ್ಮೇಳನವು ಡಿ.12 ಮತ್ತು 13 ರಂದು ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ನಡೆಯಲಿದೆ ಎಂದು ಮಂಗಳೂರು ವಿವಿ ಸೂಕ್ಷ್ಮಾಣುಜೀವ ವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗೂ ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಪ್ರೊ.ಎಂ.ಜಯಶಂಕರ್ ಅವರು ಹೇಳಿದರು.
ಅವರು ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯುರ್ವೇದ, ಯೋಗ, ಸಸ್ಯ ಮೂಲಗಳಿಂದ ಬೇರ್ಪಡಿಸುವ ರಾಸಾಯನಿಕ ವಸ್ತುಗಳು, ಸಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳು, ಹೊಸ ರೀತಿಯ ವೈದ್ಯಕೀಯ ಔಷಧಗಳ ತಯಾರಿಕೆಗಳು ಮಾನವ ಮತ್ತು ಸಾಕು ಪ್ರಾಣಿಗಳ ಆಹಾರ ಪದ್ಧತಿಗಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಕ್ರಿಯೆಗಳು ಮುಂತಾದ ಪುರಾತನ ಆಹಾರ ಪದ್ಧತಿ ಮತ್ತು ರೋಗ ನಿರೋಧಕ ಶಕ್ತಿ ವೃದ್ಧಿ ಹಾಗೂ ರೋಗ ನಿಯಂತ್ರಣ ಕ್ರಮ ಮತ್ತು ರೋಗ ನಿವಾರಣ ಕ್ರಮಗಳನ್ನು ಸೂಕ್ಷ್ಮಾಣುಜೀವಿಗಳ ಅಧ್ಯಯನಗಳಿಗೆ ಮತ್ತು ಸಂಶೋಧನೆಗಳನ್ನು ಒಳಗೊಂಡ ಈ ಪಠ್ಯಕ್ರಮದಡಿಯಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದಿರುವ ವೈಜ್ಞಾನಿಕ ಅಧ್ಯಯನ ಮತ್ತು ಸಂಶೋಧನೆಗಳನ್ನು ಪ್ರಚಾರಪಡಿಸುವ ಹಿನ್ನೆಲೆಯಲ್ಲಿ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಸಮ್ಮೇಳನವನ್ನು ಪಿ.ಎಮ್. ಉಷಾ ಯೋಜನೆ, ಕರ್ನಾಟಕ ರಾಜ್ಯ ಔಷಧಿ ಗಿಡ ಮೂಲಿಕಾ ಪ್ರಾಧಿಕಾರ ಮತ್ತು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್‌ರವರ ನೆರವಿನೊಂದಿಗೆ ಏರ್ಪಡಿಸಲಾಗಿದೆ. ಡಿ.12ರಂದು ಬೆಳಿಗ್ಗೆ 9.30 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಂತರ ವಿವಿಧ ವಿಷಯ ತಜ್ಞರಿಂದ ವಿಚಾರ ಗೋಷ್ಠಿ, ಸಂಶೋಧಕರುಗಳ ಪ್ರಬಂಧ ಮಂಡನೆ ಮತ್ತು ಸಂಜೆ 6.00 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಸ್ವಾಸ್ಥ್ಯ ಆರೋಗ್ಯಕ್ಕಾಗಿ ಪೂರಕವಾದ ಜೈವಿಕ ಮಜ್ಜಿಗೆ ಕುಡಿಯುವ ಬಗ್ಗೆ ಜಾಗೃತಿ, ಔಷಧೀಯ ಸಸ್ಯಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಸಮ್ಮೇಳನದಲ್ಲಿ ಒಟ್ಟು 450ಕ್ಕೂ ಹೆಚ್ಚು ಪ್ರತಿನಿಧಿಗಳು ರಾಜ್ಯ ಹಾಗೂ ಹೊರರಾಜ್ಯಗಳಿಂದ ಭಾಗವವಹಿಸಲಿದ್ದಾರೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಸುಬ್ರಹ್ಮಣ್ಯ ಪದ್ಯಾಣ, ಮಂಗಳೂರು ವಿವಿ ಉಪನ್ಯಾಸಕರಾದ ಡಾ. ಶರತ್ ಚಂದ್ರ ರವರು ಉಪಸ್ಥಿತರಿದ್ದರು.