ಪಿಲಿಕುಳ ಲೇಕ್ ಗಾರ್ಡನ್‌ನಲ್ಲಿ ಮತ್ಸ್ಯೋತ್ಸವ-2025 ಕಾರ್ಯಕ್ರಮ
ಮಂಗಳೂರು, ಜು.27: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಮತ್ತು ಮೀನುಗಾರಿಕೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಜಂಟಿ ಆಶ್ರಯದಲ್ಲಿ ಪಿಲಿಕುಳ ಲೇಕ್ ಗಾರ್ಡನ್‌ನಲ್ಲಿ ರವಿವಾರ ಪಿಲಿಕುಳ ಮತ್ಸ್ಯೋತ್ಸವ-2025 ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಪಿಲಿಕುಳ ಲೇಕ್ ಗಾರ್ಡನ್‌ನಲ್ಲಿ ಸಮುದ್ರದ ಮೀನಿಗಿಂತ ಭಿನ್ನವಾಗಿರುವ ಪಿಲಿಕುಳ ಲೇಕ್‌ಗಾರ್ಡನ್ ಈ ಮೀನು ತಿನ್ನಲು ರುಚಿ ಹಾಗೂ ಉತ್ತಮವಾಗಿವೆ. ಪಿಲಿಕುಳದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆಸುವ ನಿಟ್ಟಿನಲ್ಲಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಉಪಸಮಿತಿ ರಚಿಸಲಾಗಿದೆ. ಸಮಿತಿಯ ಸಲಹೆ- ಸೂಚನೆ ಯಂತೆ ಅಭಿವೃದ್ಧಿ ಕೆಲಸಗಳು ಆಗಲಿದೆ ಎಂದರು.
ಪಿಲಿಕುಳ ವೈಜ್ಞಾನಿಕ ಅಧಿಕಾರಿ ರಾಮಕೃಷ್ಣ ಮರಾಠಿ ಕಾರ್ಯಕ್ರಮ ನಿರೂಪಿಸಿದರು.
ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಅರುಣ್ ಕುಮಾರ್ ಶೆಟ್ಟಿ, ಮೀನುಗಾರಿಕೆ ಮತ್ತು ಪ್ರವಾಸೋದ್ಯಮ ಇಲಾಖೆಯ ಉಪ-ನಿರ್ದೇಶಕ ದಿಲೀಪ್ ಕುಮಾರ್, ಕೆಎಫ್‌ಡಿಸಿ ಮಹಾ ಪ್ರಬಂಧಕ ಮಹೇಶ್ ಕುಮಾರ್, ಪಿಲಿಕುಳ ಸಂಸ್ಕೃತಿ ಗ್ರಾಮದ ಯೋಜನಾಧಿಕಾರಿ ಡಾ. ನಿತೀನ್, ಮೀನುಗಾರಿಕಾ ಮಹಾವಿದ್ಯಾಲಯದ ನಿವೃತ್ತ ಡೀನ್ ಡಾ. ಶಿವಕುಮಾರ್ ಮಗದ, ಪ್ರಭಾರ ಆಡಳಿತಾಧಿಕಾರಿ ಅಶೋಕ್, ಪ್ರಾಧಿಕಾರ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಎನ್.ಜಿ. ಮೋಹನ್, ಶಿವರಾಮ ಮಲ್ಲಿ, ಹಾಸನ ಪಶು ವೈದ್ಯಕೀಯ ಇಲಾಖೆಯ ನಿವೃತ್ತ ಉಪನಿರ್ದೇಶಕ ಡಾ. ಬಿ.ಕೆ. ನಾಗರಾಜ್, ಎಂದು ಪಿಲಿಕುಳ ಲೇಕ್ ಗಾರ್ಡನ್‌ನ ನೇತೃತ್ವ ವಹಿಸಿದ್ದ ಎಂ ಎಸ್. ನಝೀರ್ ಮತ್ತಿತರರು ಉಪಸ್ಥಿತರಿದ್ದರು.
*ಪ್ರತಿ ವರ್ಷದಂತೆ ಈ ವರ್ಷವೂ ಶಿಕಾರಿಪುರ, ಹರಪ್ಪನಹಳ್ಳಿ ಮತ್ತು ಕೊಟ್ಟೂರಿನ ನಿಪುಣ ಮೀನುಗಾರರು ಕಳೆದ ರಾತ್ರಿ ಕೆರೆಗೆ ಬಲೆ ಬೀಸಿದ್ದರು. ರವಿವಾರ ಮುಂಜಾವದಿಂದ ತೆಪ್ಪಗಳ ಮೂಲಕ ದಡಕ್ಕೆ ಮೀನು ತರಲಾಯಿತು. ರೋಹು, ಕಾಟ್ಲ, ಕಾಮನ್ ಕಾರ್ಪ್ (ಗೌರಿ ಮೀನು) ಮತ್ತು ತೆಲಪಿಯಾ ಮೀನು ಮಾರಾಟ ಬಿರುಸು ಪಡೆದಿತ್ತು.
*1 ಕಿಲೋ ತೆಲಪಿಯಾ ಮೀನಿಗೆ 100 ರೂ., ರೋಹು, ಕಾಟ್ಲ, ಕಾಮನ್ ಕಾರ್ಪ್‌ಗೆ 160 ರೂ. ನಿಗದಿಪಡಿಸಲಾಗಿತ್ತು. ಈ ಬಾರಿ ಸಾವಿರ ಕಿಲೋಗಿಂತಲೂ ಹೆಚ್ಚಿನ ತೂಕದ ಮೀನು ಲಭ್ಯವಾಗಿದೆ ಎಂದು ತಿಳಿದು ಬಂದಿದೆ.
*ಲೇಕ್ ಗಾರ್ಡನ್‌ಗೆ ಈ ಬಾರಿ 20,000ಕ್ಕೂ ಅಧಿಕ ಮೀನಿನ ಮರಿಗಳನ್ನು ಬಿಡಲಾಯಿತು. ಈ ಬಾರಿ ಸುಮಾರು ನಾಲ್ಕೈದು ಕಿಲೋ ತೂಕದ ಮೀನುಗಳು ಬಲೆಗೆ ಬಿದ್ದಿವೆ. ಗ್ರಾಹಕರಿಗೆ ಅನುಕೂಲವಾಗುವಂತೆ ಕಿಲೋ ಮೀನಿಗೆ 30 ರೂ. ಪಡೆದು ಶುಚಿ ಮಾಡಿ ಕೊಡುವ ವ್ಯವಸ್ಥೆಯನ್ನೂ ಮಾಡಲಾಗಿತ್ತು.