×
Ad

ಮೂಡುಬಿದಿರೆ | ಕಲ್ಲಬೆಟ್ಟು ಸಹಕಾರಿ ಸಂಘದಲ್ಲಿ ಉದ್ಯೋಗಿಗೆ ಹಿಂಭಡ್ತಿ : ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ

Update: 2025-09-28 09:44 IST

ಮೂಡುಬಿದಿರೆ: ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದಲ್ಲಿ ಕಳೆದ 30 ವರ್ಷಗಳಿಂದ ಉದ್ಯೋಗಿಯಾಗಿ ಹಾಗೂ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಅನಿತಾ ಶೆಟ್ಟಿ ಅವರನ್ನು ಯಾವುದೇ ನೋಟೀಸ್ ಅಥವಾ ಪೂರ್ವ ಸೂಚನೆ ನೀಡದೆ ಹಿಂಭಡ್ತಿ ಗೊಳಿಸಿರುವುದನ್ನು ಖಂಡಿಸಿ, ಶನಿವಾರ ಸಂಘದ ಮುಂಭಾಗದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯ ವೇಳೆ ಸಹಕಾರಿ ಇಲಾಖೆಯ ಅಧಿಕಾರಿ ತ್ರಿವೇಣಿ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿದ ಶಾಸಕ ಉಮಾನಾಥ ಎ. ಕೋಟ್ಯಾನ್ ಅವರು, “ಯಾರ ದೂರು ಆಧರಿಸಿ ಕಲ್ಲಬೆಟ್ಟು ಸಹಕಾರಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ದಿಢೀರ್ ಹಿಂಭಡ್ತಿ ನೀಡಲಾಗಿದೆ? ಹಿಂಭಡ್ತಿ ನೀಡಲು ನಿಮಗೆ ಅಧಿಕಾರವಿದೆಯೆ? ಕೂಡಲೇ ಆ ಆದೇಶವನ್ನು ಹಿಂಪಡೆದು ಅವರನ್ನು ಹುದ್ದೆಯಲ್ಲಿ ಮುಂದುವರಿಸಬೇಕು. ಇಲ್ಲದಿದ್ದರೆ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಕಾನೂನು ಕ್ರಮ ಕೈಗೊಳ್ಳುತ್ತೇನೆ,” ಎಂದು ಎಚ್ಚರಿಕೆ ನೀಡಿದರು.

“ಜನಪ್ರತಿನಿಧಿಯಾಗಿರುವ ನನ್ನ ಕರೆ ಸ್ವೀಕರಿಸುವುದಿಲ್ಲ, ಹಿಂತಿರುಗಿ ಕರೆ ಮಾಡದೆ ಅಗೌರವ ತೋರಿಸುತ್ತೀರಿ. ವಾಟ್ಸಾಪ್ ಮೂಲಕ ವಿಷಯ ಕೇಳಿದರೂ ಸ್ಪಂದಿಸಿಲ್ಲ,” ಎಂದು ಶಾಸಕರು ಸಹಕಾರಿ ಇಲಾಖೆಯ ಅಧಿಕಾರಿ ತ್ರಿವೇಣಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಪ್ರತಿಭಟನೆಯಲ್ಲಿ ಮಾತನಾಡಿದ ಸಂಘದ ಮಾಜಿ ಅಧ್ಯಕ್ಷ ಕೆ. ಕೃಷ್ಣರಾಜ ಹೆಗ್ಡೆ ಅವರು, “ಅನಿತಾ ಶೆಟ್ಟಿ ಅವರಿಗೆ ಸಹಕಾರಿ ಇಲಾಖೆಯ ಮೇಲಾಧಿಕಾರಿಗಳು ಅನ್ಯಾಯ ಮಾಡಿದ್ದಾರೆ. ಯಾರದ್ದೋ ದೂರಿಗೆ ಮಣಿದು ಈ ಕ್ರಮ ಕೈಗೊಂಡಿದ್ದಾರೆ. ಇದು ಕಾನೂನು ಬಾಹಿರ. ಆಡಳಿತಾಧಿಕಾರಿಗೆ ಹಿಂಭಡ್ತಿ ಆದೇಶ ಮಾಡಲು ಯಾವುದೇ ಅಧಿಕಾರವಿಲ್ಲ,” ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ದಿಲೀಪ್ ಶೆಟ್ಟಿ, ನಿರ್ದೇಶಕರಾದ ಪುರುಷೋತ್ತಮ ಶೆಟ್ಟಿ, ಮಾಜಿ ಅಧ್ಯಕ್ಷ ಸುರೇಶ್ ಕೋಟ್ಯಾನ್, ಮಾಜಿ ನಿರ್ದೇಶಕರಾದ ಹರೀಶ್ ಶೆಟ್ಟಿ ಮಜಲೋಡಿ, ಶಶಿಧರ ಶೆಟ್ಟಿ, ನಳಿನಿ ಹೆಗ್ಡೆ ಸೇರಿದಂತೆ ಹಾಲಿ ನಿರ್ದೇಶಕರು, ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News