ಬಜ್ಪೆ| ದ್ವಿಚಕ್ರ ವಾಹನದಲ್ಲಿ ಮಾರಕಾಸ್ತ್ರ ಪ್ರದರ್ಶಿಸಿದ ಪ್ರಕರಣ: ಓರ್ವ ಅಪ್ರಾಪ್ತ ಸೇರಿ ಮೂವರ ಬಂಧನ
Update: 2025-06-03 21:27 IST
ಬಜ್ಪೆ: ಇಲ್ಲಿನ ಪೊರ್ಕೋಡಿ ಎಂಬಲ್ಲಿ ದ್ವಿಚಕ್ರ ವಾಹನದಲ್ಲಿ ಮಾರಕಾಸ್ತ್ರ ಪ್ರದರ್ಶಿಸಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಅಪ್ರಾಪ್ತ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಪೊರ್ಕೋಡಿ ಗ್ರಾಮದ ಅಂಬೇಡ್ಕರ್ ಕಾಲನಿ ನಿವಾಸಿಗಳಾದ ಅಶ್ವತ್, ರವಿಶಂಕರ್ ಬಂಧಿತ ಆರೋಪಿಗಳು ಎಂದು ಪೊಲೀಸರು ಮಾಹಿತಿ ನೀಡಿದ್ದು, ಓರ್ವ ಅಪ್ರಾಪ್ತ ಎಂದು ತಿಳಿಸಿದ್ದಾರೆ.
ಆರೋಪಿಗಳು ಪೊರ್ಕೋಡಿ ಗ್ರಾಮದಲ್ಲಿ ತಲವಾರು ಮಾದರಿಯ ಮಾರಕಾಯುಧವೊಂದನ್ನು ಪ್ರದರ್ಶಿಸುತ್ತಾ ಗ್ರಾಮಸ್ಥರನ್ನು ಭಯ ಪಡಿಸುವ ರೀತಿಯಲ್ಲಿ ಸುತ್ತಾಡುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಗ್ರಾಮಸ್ಥರು ಬಜ್ಪೆ ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೆ, ಆರೋಪಿಗಳ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಬಜ್ಪೆ ಪೊಲೀಸರು ಆರೋಪಿಗಳ ಪತ್ತೆ ಹಚ್ಚಿ ಅವರ ಬಳಿ ಇದ್ದ ಗರಗಸ ಮಾದರಿಯ ಮಾರಕಾಸ್ತ್ರ, ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡು ಅವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.