×
Ad

ಮಂಗಳೂರು| ಆನ್‌ಲೈನ್ ತರಗತಿ ನೀಡುವ ನೆಪದಲ್ಲಿ ವಂಚನೆ: ಪ್ರಕರಣ ದಾಖಲು

Update: 2025-06-06 22:25 IST

ಮಂಗಳೂರು, ಜೂ.6: ಮಕ್ಕಳಿಗೆ ಆನ್‌ಲೈನ್ ತರಗತಿ ನೀಡುವುದಾಗಿ ಹೇಳಿ 76,800 ರೂ. ವಂಚಿಸಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇ 22ರಂದು ಶ್ರೀ ಚೈತನ್ಯ ಅಕಾಡಮಿ ಎಂಬ ಶೀರ್ಷಿಕೆಯಡಿ ವಾಟ್ಸ್‌ಆ್ಯಪ್ ಮೂಲಕ ಬಂದ ಮೆಸೇಜ್‌ನಲ್ಲಿ ಆನ್‌ಲೈನ್ ತರಗತಿ ನೀಡುವ ಬಗ್ಗೆ ವಿವರವಿತ್ತು. ಅದರಲ್ಲಿನ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಚಂದನ್ ರಾವ್ ಎನ್ನುವ ವ್ಯಕ್ತಿ ಆನ್‌ಲೈನ್ ತರಗತಿ ಮೂಲಕ ಪಾಠ ಕಲಿಸುತ್ತೇನೆ. ಚೈತನ್ಯ ಅಕಾಡಮಿಯ ಜತೆ ಇನ್ಫಿನಿಟಿ ಲರ್ನ್ ಆ್ಯಪ್‌ನ ಮೂಲಕವೂ ಕಲಿಸುವುದಾಗಿ ಭರವಸೆ ನೀಡಿ, ಸಿಬಿಎಸ್‌ಇ ಆನ್‌ಲೈನ್ ಪಠ್ಯಕ್ಕೆ 64 ಸಾವಿರ ರೂ. ಶುಲ್ಕ ಎಂದಿದ್ದ. ಅದರಂತೆ ತಾನು 12,800 ರೂ.ವನ್ನು ಚಂದನ್ ರಾವ್ ತಿಳಿಸಿದ ಖಾತೆಗೆ ಗೂಗಲ್ ಪೇ ಮೂಲಕ ಕಳುಹಿಸಿದ್ದೆ. ಸ್ವಲ್ಪ ಸಮಯದ ಬಳಿಕ ಖಾಸಗಿ ಫೈನ್ಸಾನ್ಸ್‌ ನಿಂದ 64 ಸಾವಿರ ರೂ. ಸಾಲ ಪಡೆದಿರುವ ಬಗ್ಗೆ ತನಗೆ ಮೆಸೇಜ್ ಬಂದಿದೆ. ಇದನ್ನು ಪರಿಶೀಲಿಸಿದಾಗ ಚಂದನ್‌ರಾವ್ ಸೈಬರ್ ತಂತ್ರಜ್ಞಾನದ ಮೂಲಕ ತನ್ನ ದಾಖಲೆಗಳನ್ನು ಬಳಸಿ ಫೈನಾನ್ಸ್‌ನಿಂದ ಸಾಲ ಪಡೆದಿರುವುದು ಕಂಡು ಬಂದಿದೆ ಎಂದು ದೂರುದಾರರು ತಿಳಿಸಿದ್ದಾರೆ.

ಮೇ 27ರಿಂದ ಆನ್‌ಲೈನ್ ತರಗತಿ ಆರಂಭವಾಗುವುದು ಎಂದು ಆತ ತಿಳಿಸಿದ್ದ. ಈವರೆಗೂ ಲೈವ್ ಆನ್‌ಲೈನ್ ತರಗತಿ ತೆಗೆದುಕೊಳ್ಳದೆ ಕೇವಲ ರೆಕಾರ್ಡೆಡ್ ವೀಡಿಯೋಗಳನ್ನು ಮಾತ್ರ ಕಳುಹಿಸಿದ್ದಾನೆ. ಈ ಬಗ್ಗೆ ಚಂದನ್ ರಾವ್‌ಗೆ ಕರೆ ಮಾಡಿದರೂ ಆತ ಕರೆ ಸ್ವೀಕರಿಸಿರಲಿಲ್ಲ. ಇಮೇಲ್‌ಗೂ ಪ್ರತಿಕ್ರಿಯೆ ನೀಡಿಲ್ಲ. ಆಕ್ರಮವಾಗಿ ಹಣ ಪಡೆಯುವ ಉದ್ದೇಶದಿಂದ ಆನ್‌ಲೈನ್ ಮೂಲಕ ಮೋಸ ಮಾಡಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರುದಾರರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News