×
Ad

ಮಂಗಳೂರು: ಹಿರಿಯ ಭೌತಶಾಸ್ತ್ರಜ್ಞ ಐ.ವಿ ರಾವ್ ನಿಧನ

Update: 2025-06-09 19:13 IST

ಮಂಗಳೂರು, ಜೂ.9: ಹಿರಿಯ ಭೌತಶಾಸ್ತ್ರ ಪ್ರಾಧ್ಯಾಪಕ ಪ್ರೊ. ಇನೋಳಿ ವಾಸುದೇವ ರಾವ್(80) ವಯೋಸಹಜ ಸಮಸ್ಯೆಗಳಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.

ಪ್ರೊ. ಐ. ವಿ ರಾವ್ ಎಂದೇ ಪ್ರಸಿದ್ಧರಾಗಿದ್ದ ಇವರು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಭೌತ ಶಾಸ್ತ್ರ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿ, ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನಲ್ಲಿ ವೃತ್ತಿ ಮುಂದುವರೆಸಿ, ನಂತರ ಮಂಗಳೂರಿನ ಸೈಂಟ್ ಎಲೋಶಿಯಸ್ ಕಾಲೇಜಿನಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದರು.

ಮೃತರು ಪತ್ನಿ ಪದ್ಮಲತಾ ವಿ. ರಾವ್ 2 ಪುತ್ರರು, 2 ಪುತ್ರಿಯರು, ಮೊಮ್ಮಕ್ಕಳು, ಅಪಾರ ಬಂಧುವರ್ಗ ವನ್ನು, ವಿದ್ಯಾರ್ಥಿ ಸಮೂಹವನ್ನು, ಸಮಾಜ ಬಂಧುಗಳನ್ನು ಅಗಲಿದ್ದಾರೆ.

ಬಾಸ್ಕೋ ಪಬ್ಲಿಕೇಶನ್ಸ್ ಪ್ರಕಟಿಸುತ್ತಿದ್ದ ಪದವಿ ಪೂರ್ವ ಶಿಕ್ಷಣಕ್ಕಾಗಿ ಭೌತಶಾಸ್ತ್ರಕ್ಕೆ ಸಂಬಂಧಿಸಿ ಪಠ್ಯಪುಸ್ತಕಗಳನ್ನು ಹಾಗೂ ಸಿ.ಇ.ಟಿ ಪುಸ್ತಕಗಳನ್ನು ಇವರು ಹೊರತಂದಿದ್ದರು.

1970ರ ದಶಕದಲ್ಲಿ ಕೆ.ಆರ್.ಇ.ಸಿ ಯ ಸೈನ್ಸ್ ಫೌಂಡೇಶನ್ ಪ್ರಕಟಿಸುತ್ತಿದ್ದ ‘ವಿಜ್ಞಾನಲೋಕ’ ಪುಸ್ತಕದ ಲೇಖಕರಾಗಿ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

ಸುಮಾರು 15 ವರುಷಗಳ ಕಾಲ ವಿಶ್ವಹಿಂದೂ ಪರಿಷತ್ತಿನ ಸಂಸ್ಕಾರ ಕೇಂದ್ರದ ರೂವಾರಿಯಾಗಿ ನಗರ ಸಂಕೀರ್ತನೆ, ಮಕ್ಕಳಿಗಾಗಿ ಅಧ್ಯಾತ್ಮ ಶಿಬಿರಗಳನ್ನು ನಡೆಸುವಲ್ಲಿ ಶ್ರಮಿಸಿದ್ದರು.

ಪೋರ್ಚುಗೀಸರ ಕಾಲದಲ್ಲಿ ನಾಶಗೊಂಡು ಭೂಗತವಾಗಿದ್ದ ಇನೋಳಿ ಶ್ರೀ ಸೋಮನಾಥ ದೇವಸ್ಥಾನದ ಪುನರ್ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ ಇತಿಹಾಸ ಪ್ರಸಿದ್ಧ ದೇಗುಲವು ಮತ್ತೆ ತಲೆಯೆತ್ತಿ ನಿಲ್ಲುವಂತೆ ಮಾಡಲು ಅವಿರತ ಶ್ರಮಿಸಿದ್ದಾರೆ.

ಇವರ ನಿಧನಕ್ಕೆ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಮಾಜಿ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ, ವಿದ್ವಾಂಸ ಡಾ.ಎಂ ಪ್ರಭಾಕರ ಜೋಶಿ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News