×
Ad

ಉಪ್ಪಿನಂಗಡಿ| ರಾಷ್ಟ್ರೀಯ ಹೆದ್ದಾರಿಗೆ ಗುಡ್ಡ ಕುಸಿತ: ವಾಹನ ಸಂಚಾರಕ್ಕೆ ಅಡಚಣೆ

Update: 2025-06-24 21:19 IST

ಉಪ್ಪಿನಂಗಡಿ: ಕೌಕ್ರಾಡಿ ಗ್ರಾಮದ ಮಣ್ಣಗುಂಡಿಯಲ್ಲಿ ಇಂದು ಸಂಜೆ ಗುಡ್ಡ ಜರಿದು ಮಣ್ಣು ರಸ್ತೆಗೆ ಬಿದ್ದ ಪರಿಣಾಮ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿ.ಸಿ.ರೋಡ್‍ನಿಂದ ಅಡ್ಡಹೊಳೆ ತನಕ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಮಣ್ಣಗುಂಡಿಯಲ್ಲಿ ರಸ್ತೆ ನಿರ್ಮಾಣ ಸಂದರ್ಭ ಗುಡ್ಡ ಅಗೆಯಲಾಗಿದೆ. ಇಲ್ಲಿ ನೇರವಾಗಿ ಗುಡ್ಡ ಅಗೆದಿರುವುದರಿಂದ ಕೆಲ ದಿನಗಳಿಂದ ಮಣ್ಣು ಜರಿಯುತ್ತಿದ್ದು ಒಂದು ಬದಿಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇಂದು ಸುರಿದ ಭಾರೀ ಮಳೆಯಿಂದಾಗಿ ಸಂಜೆ ವೇಳೆ ದೊಡ್ಡ ಪ್ರಮಾಣದಲ್ಲಿ ಗುಡ್ಡ ಜರಿದಿದ್ದು ಮಣ್ಣು ಮರಗಳ ಸಮೇತ ರಸ್ತೆಗೆ ಬಿದ್ದಿದೆ. ಇದರಿಂದಾಗಿ ರಸ್ತೆ ಸಂಪೂರ್ಣ ಮುಚ್ಚಿಹೋಗಿದೆ ಎಂದು ವರದಿಯಾಗಿದೆ.

ಘನವಾಹನಗಳ ಸಂಚಾರ ಸ್ಥಗಿತ:

ಮಣ್ಣು ರಸ್ತೆಗೆ ಬಿದ್ದಿರುವುದರಿಂದ ಬಸ್ಸು ಹಾಗೂ ಇನ್ನಿತರ ಘನ ವಾಹನಗಳ ಸಂಚಾರ ಸಂಜೆ ವೇಳೆ ಸ್ಥಗಿತಗೊಂಡಿದೆ. ಕೆಲವು ಸಣ್ಣ ವಾಹನಗಳು ಕಿರಿದಾದ ಜಾಗದಲ್ಲಿ ಸಂಚಾರ ಮಾಡುತ್ತಿವೆ. ನೆಲ್ಯಾಡಿ ಹೊರಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಂಬಂಧಪಟ್ಟವರಿಂದ ಮಣ್ಣು ತೆರವು ಕಾರ್ಯ ನಡೆಸಿದ್ದಾರೆ.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News