×
Ad

ಮಾದಕ ವ್ಯಸನಕ್ಕೆ ‘ನೋ’ ಅನ್ನದಿದ್ದರೆ ಜೀವನ ಹಾಳು: ವ್ಯಸನದಿಂದ ಹೊರಬಂದ ಸಂತ್ರಸ್ತೆಯ ಕಿವಿಮಾತು

Update: 2025-06-26 18:09 IST

ಮಂಗಳೂರು, ಜೂ. 26: ‘ಕಾಲೇಜಿನ ಹದಿ ಹರೆಯದಲ್ಲಿ ಶೋಕಿಗಾಗಿ, ನನ್ನ ಜೀವನಕ್ಕೆ ಸ್ವಾತಂತ್ರ್ಯ ಬೇಕೆನ್ನುವ ಉನ್ಮಾದದಲ್ಲಿ ಮಾದಕ ವ್ಯಸನದ ಚಟಕ್ಕೆ ತುತ್ತಾಗಿ ದೈಹಿಕವಾಗಿ, ಮಾನಸಿಕವಾಗಿ ತೊಳಲಾಟಕ್ಕೆ ಸಿಲುಕಿ ಅದರಿಂದ ಹೊರಬೇಕೆಂದರೆ ಸಮಾಜದೆದುರು ನಾನು ಮಾತ್ರವಲ್ಲ, ನನ್ನ ತಾಯಿಯೂ ತಲೆತಗ್ಗಿಸುವಂತಾಯಿತು. ಹಾಗಾಗಿ ಯಾವುದೇ ರೀತಿಯ ಮಾದಕ ವ್ಯಸನಗಳಿಗೆ ‘ನೋ’ ಎಂಬುದನ್ನು ಕಲಿಯಿರಿ’ ಎಂದು ಸುಮಾರು 12 ವರ್ಷಗಳ ಮಾದಕ ವ್ಯಸನ ಚಟದಿಂದ ಹೊರಬಂದು ಇದೀಗ ಈ ದುಶ್ಚಟದ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಬೀನಾ ಎಂಬವರು ಕಿವಿಮಾತು ಹೇಳಿದ್ದಾರೆ.

ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮಂಗಳೂರು ನಗರ ಪೊಲೀಸ್ ಇಲಾಖೆಯು ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಪ್ರೊಫೆಶನಲ್ ಎಜುಕೇಶನ್ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ ಆಶ್ರಯದಲ್ಲಿ ಗುರುವಾರ ಆಯೋಜಿಸಿದ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನದಲ್ಲಿ ಭಾಗವಹಿಸಿದ್ದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳನ್ನುದ್ದೇಶಿಸಿ ತಮ್ಮ ಅನುಭವಗಳನ್ನು ಅವರು ಹಂಚಿಕೊಂಡರು.

‘ಕಾಲೇಜಿನ ಅವಧಿಯಲ್ಲಿ ಸಿಗರೇಟ್, ಬಿಯರ್, ವೈನ್, ಗಾಂಜಾದಿಂದ ಆರಂಭವಾದ ನನ್ನ ಮಾದಕ ವ್ಯಸನದ ಪಯಣ, ಉತ್ತಮ ವೇತನದ ಉದ್ಯೋಗ, ವಿದೇಶ ಪ್ರಯಾಣದ ಅವಕಾಶದ ಹೊರತಾಗಿಯೂ ನನ್ನ ತಾಯಿಯಿಂದ ದೂರವಾಗಿ, ಭಾವನೆಗಳೇ ಇಲ್ಲದಂತೆ ನನ್ನನ್ನು ರೂಪಿಸಿತ್ತು. ಕೊನೆಗೊಂದು ದಿನ ಈ ಚಟದಿಂದ ಹೊರಬರಲಾರದೆ ನನ್ನ ಜೀವನವನ್ನೇ ಅಂತ್ಯಗೊಳಿಸುವ ನಿರ್ಧಾರಕ್ಕೆ ಬಂದು ತಾಯಿಗೆ ಕರೆ ಮಾಡಿದಾಗ, ಆಕೆಯ ಸಾಂತ್ವಾನದ ನುಡಿ ನಾನು ಮತ್ತೆ ತಾಯಿ ಬಳಿ ಬರುವಂತೆ ಮಾಡಿತು. ಆದರೆ ಅದಾಗಲೇ ಹದಗೆಟ್ಟಿದ್ದ ನನ್ನ ಮಾನಸಿಕ ಮತ್ತು ದೈಹಿಕ ಆರೋಗ್ಯ ಸ್ಥಿತಿಯಿಂದ ನಾನು ಹೊರಬರಲು ಇನ್ನಿಲ್ಲದಂತೆ ಒದ್ದಾಡಬೇಕಾಯಿತು. ನಮ್ಮ ಜೀವನವನ್ನು ಹೇಗೆ ಮುನ್ನಡೆಸಬೇಕು ಎಂಬ ಚಿಂತನೆ ಇಲ್ಲದ ಸಮಯದಲ್ಲಿ ನಾವು ತೆಗೆದುಕೊಳ್ಳುವ ಕೆಲವೊಂದು ನಿರ್ಧಾರಗಳು ನಮ್ಮ ಜತೆ ನಮ್ಮ ಕುಟುಂಬವನ್ನೂ ಜೀವನಪೂರ್ತಿ ತಲೆತಗ್ಗಿಸುವಂತೆ ಮಾಡುತ್ತದೆ. ಅದಕ್ಕೆ ನಾವು ಅವಕಾಶ ನೀಡಬಾರದು. ಮಾದಕ ದ್ರವ್ಯದ ವ್ಯಸನವೆಂಬ ಅಪರಾಧದ ಸಂತ್ರಸ್ತರಾಗುತ್ತಿರುವ ಮಹಿಳೆಯರ ಸಂಖ್ಯೆಯೂ ಹೆಚ್ಚುತ್ತಿದ್ದು, ಮಹಿಳೆಯರಿಗಾಗಿನ ಡಿಎಡಿಕ್ಷನ್ ಸೆಂಟರ್‌ಗಳ ಅಗತ್ಯವಿದೆ’ ಎಂದು ಬೀನಾ ಅಭಿಪ್ರಾಯಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ನಿಟ್ಟೆ ವಿವಿಯ ಉಪಕುಲಪತಿ ಪ್ರೊ. ಡಾ. ಎಂ.ಎಸ್. ಮೂಡಿತ್ತಾಯ, ಜಗತ್ತಿನ ಅತೀ ದೊಡ್ಡ ಯುವಶಕ್ತಿಯನ್ನು ಹೊಂದಿದ ರಾಷ್ಟ್ರವಾಗಿ ರೂಪುಗೊಳ್ಳುತ್ತಿರುವ ಭಾರತದಲ್ಲಿ ಮುಖ್ಯವಾಗಿ ಯುವ ಪೀಳಿಗೆ ದುಶ್ಚಟಗಳಿಂದ ದೂರ ಇರಬೇಕಾಗಿದೆ. ಈ ದೇಶದ ರಾಯಭಾರಿಗಳಾಗಿ ರುವ ಯುವ ಜನತೆ ದುಶ್ಚಟಗಳಿಗೆ ತೊಡಗಿಕೊಳ್ಳುವವರಿಗೆ ಮಾರ್ಗದರ್ಶಕರಾಗಿಬೇಕು ಎಂದು ಯುವ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮಾತನಾಡಿ, ಕ್ಷಣಿಕ ಸುಖವನ್ನು ಬದಿಗಿಟ್ಟು ಮುಂದಿನ ಜೀವನಕ್ಕೆ ಬೇಕಾದ ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ತಮ್ಮ ಮನೆ, ಸ್ನೇಹಿತರಿಂದಲೇ ಈ ದುಶ್ಚಟಗಳಿಂದ ದೂರವಿರುವಂತೆ ಜಾಗೃತಿ ಮೂಡಿಸಬೇಕು. ತಮ್ಮ ಸುತ್ತ ಮುತ್ತಲಲ್ಲಿ ಇಂತಹ ದುಶ್ಚಟಗಳಿಗೆ ಒಳಗಾದವರ ಬಗ್ಗೆ ಪೊಲೀಸ್ ಇಲಾಖೆಯ ಸಹಾಯವಾಣಿಗೆ ಗೌಪ್ಯ ವಾಗಿ ಮಾಹಿತಿ ನೀಡಬಹುದು. ಪೊಲೀಸರು ಮಾದಕ ವ್ಯಸನಕ್ಕೆ ತುತ್ತಾದವರನ್ನು ಬಂಧಿಸದೆ, ಅವರನು ಸಂತ್ರಸ್ತರೆಂದು ಪರಿಗಣಿಸಿ ಅದರಿಂದ ಹೊರಬರುವ ನಿಟ್ಟಿನಲ್ಲಿ ಸಹಕಾರ ನೀಡಲಿದ್ದಾರೆ ಎಂದು ಹೇಳಿದರು.

ಡಿಸಿಪಿಗಳಾದ (ಕಾನೂನು ಮತ್ತು ಸುವ್ಯವಸ್ಥೆ)(ಸಿದ್ದಾರ್ಥ್ ಗೋಯಲ್, (ಅಪರಾಧ ಮತ್ತು ಸಂಚಾರ) ಕೆ. ರವಿಶಂಕರ್, (ನಗರ ಮತ್ತು ಮೀಸಲು ಪಡೆ) ಉಮೇಶ್ ಪಿ. ಉಪಸ್ಥಿತರಿದ್ದರು. ಎಸಿಪಿ ನಜ್ಮಾ ಫಾರೂಕಿ ಸ್ವಾತಿಸಿದರು. ಪವಿತ್ರ ಮಲ್ಯ ಪ್ರಾರ್ಥಿಸಿದರು. ಎಸಿಪಿ ಗೀತಾ ಕುಲಕರ್ಣಿ ವಂದಿಸಿದರು. 

ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಡ್ರಗ್ಸ್ ವಿರೋಧಿ ಪ್ರಮಾಣಪತ್ರ ಬೋಧಿಸಿದರು. ಉದ್ಘಾಟನಾ ಸಮಾರಂಭದ ಬಳಿಕ ಪುರಭವನದಿಂದ ಕ್ಲಾಕ್‌ಟವರ್‌ವರೆಗೆ ವಿದ್ಯಾರ್ಥಿಗಳಿಂದ ನಡಿಗೆ ನಡೆಯಿತು.

ಚಲನಚಿತ್ರ ನಟ ರೂಪೇಶ್ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ, ಡ್ರಗ್ಸ್‌ನಂತಹ ಮಾದಕ ವ್ಯಸನಗಳ ಬಗ್ಗೆ ಅರ್ಥ ಮಾಡಿಕೊಳ್ಳದಿದ್ದರೆ ಜೀವನವೇ ಬೋರ್ ಆಗುತ್ತದೆ. ಜೀವನಕ್ಕೆ ನಶೆ ಬೇಕು ಆದರೆ ಅದು ಸಾಧನೆಯ ನಶೆಯಾಗಿರಬೇಕು.ಪೋಷಕರು ಸಂತಸ ಪಡುವ ನಶೆ ಬೇಕು. ಯುವಕರು ಸರಿಯಾದ ದಾರಿಯಲ್ಲಿ ನಡೆದಾಗ ಮಾತ್ರವೇ ದೇಶಕ್ಕೆ ಆಸ್ತಿಯಾಗುತ್ತಾರೆ. ಇಲ್ಲವಾದಲ್ಲಿ ಹೊರೆಯಾಗುತ್ತಾರೆ ಎಂದು ಹೇಳಿದರು.

‘ಡ್ರಗ್ಸ್ ವಿರುದ್ಧ ಜಾಗೃತಿ ಹಾಗೂ ನಿಗಾ ವಹಿಸುವ ನಿಟ್ಟಿನಲ್ಲಿ ಕಾಲೇಜುಗಳಲ್ಲಿ ಡ್ರಗ್ಸ್ ವಿರೋಧಿ ಸಮಿತಿ ಗಳನ್ನು ರಚಿಸಿ ನಿಗಾ ವಹಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಈ ಸಮಿತಿಯ ಮೂಲಕ ಡ್ರಗ್ಸ್ ಬಳಕೆಯ ಕುರಿತಂತೆ ತಪಾಸಣೆ ಮಾಡಿ, ಬಳಕೆ ಮಾಡುವವರನು ಸಂತ್ರಸ್ತರನ್ನಾಗಿ ಪರಿಗಣಿಸಿ ಅವರಿಗೆ ಅಗತ್ಯ ನೆರವು ಒದಗಿಸಬೇಕು. ವಿದ್ಯಾರ್ಥಿಗಳು ತಮ್ಮ ಸ್ನೇಹಿತರ ಬಗ್ಗೆ ಕಾಳಜಿ ವಹಿಸಿಕೊಂಡು ಅವರ ಜವಾಬ್ಧಾರಿ ತಮ್ಮ ಹೊಣೆ ಎಂದು ಭಾವಿಸಿದಾಗ ಮಾದಕ ದ್ರವ್ಯ ಬಳಕೆಯನ್ನು ನಿಯಂತ್ರಿಸಲು ಸಾಧ್ಯ ಆಗಲಿದೆ. ಡ್ರಗ್ಸ್ ಚಟಕ್ಕೆ ತುತ್ತಾದವರ ಬಗ್ಗೆ ಮಾಹಿತಿ ನೀಡಲು ಅನುಕೂಲವಾಗುವಂತೆ ಇಲಾಖೆಯಿಂದ ಕ್ಯೂಆರ್ ಕೋಡ್ ರೂಪಿಸಲಾಗಿದೆ. ಇದನ್ನು ಎಲ್ಲಾ ಕಾಲೇಜುಗಳಲ್ಲಿಯೂ ಲಭ್ಯವಾಗುವಂತೆ ಮಾಡಲಾ ಗುತ್ತದೆ. ಈ ಕ್ಯೂಆರ್ ಕೋಡ್ ಮೂಲಕ ಡ್ರಗ್ಸ್ ವ್ಯಸನಿಗಳ ಬಗ್ಗೆ ಮಾಹಿತಿಯನ್ನು ಒದಗಿಸಬಹುದು’ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ದ.ಕ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಅರುಣ್ ಕುಮಾರ್, ಡ್ರಗ್ಸ್ ಚಟ ನಮ್ಮ ಚಿಂತನಾ ಸಾಮರ್ಥ್ಯ ಕುಗ್ಗಿಸಿ ಭಾವನಾರಹಿತ ಪ್ರಾಣಿಗಳನ್ನಾಗಿಸುತ್ತವೆ. ಮನೆಗಳಲ್ಲಿ ಪೋಷಕರು, ಶಾಲೆಗಳಲ್ಲಿ ಶಿಕ್ಷಕರು ತಮ್ಮ ಮಕ್ಕಳ ಡ್ರಗ್ಸ್ ಚಟುವಟಿಕೆಗಳ ಬಗ್ಗೆ ನಿಗಾವಹಿಸಿ ಪೊಲೀಸರಿಗೆ ಮಾಹಿತಿ ನೀಡಿದರೆ, ಈ ಪಿಡುಗನ್ನು ನಿಯಂತ್ರಿಸಲು ಸಾಧ್ಯವಾಗಲಿದೆ. ಸಾರ್ವಜನಿಕ ರಿಂದಲೂ ಈ ನಿಟ್ಟಿನಲ್ಲಿ ಪೊಲೀಸರಿಗೆ ಸಹಕಾರ ದೊರೆಯಬೇಕು ಎಂದು ಹೇಳಿದರು.















Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News