×
Ad

ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದಿಂದ ಸಾಧನಾ ಸಂಭ್ರಮ

Update: 2025-07-27 22:23 IST

ಮಂಗಳೂರು: ವಿದ್ಯಾರ್ಥಿಗಳಲ್ಲಿ ಸಾಕಷ್ಟು ಕೌಶಲಗಳಿವೆ. ಹಾಗಾಗಿ ಅವುಗಳನ್ನು ಗುರುತಿಸಿ ತಯಾರು ಗೊಳಿಸುವ ಕಾರ್ಯವಾಗಬೇಕು. ಈ ಬಗ್ಗೆ ಪೂರಕ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ಅಳವಡಿಸಿದರೆ ಅನುಕೂಲವಾಗುತ್ತದೆ ಎಂದು ಶಿಕ್ಷಣ ಇಲಾಖೆಯ ದ.ಕ. ಉಪನಿರ್ದೇಶಕಿ (ಅಭಿವೃದ್ಧಿ) ರಾಜಲಕ್ಷ್ಮಿ ಹೇಳಿದರು.

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಮಂಗಳೂರು ಉತ್ತರ ವಲಯದ ವತಿಯಿಂದ ನಗರದ ಸಂತ ಅಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ರವಿವಾರ ನಡೆದ ಸಾಧನಾ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಉಪ್ಪಿನಂಗಡಿ ಶಾಲೆಯ ವಿದ್ಯಾರ್ಥಿ ಅಬ್ದುಲ್ ಬಾಷಿತ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿ ಜಪಾನ್‌ಗೆ ತೆರಳಿದ ಉದಾಹರಣೆಯನ್ನು ನೀಡಿದ ಅವರು, ಇನ್‌ಸ್ಪಯರ್ ಅವಾರ್ಡ್‌ಗೆ ನೋಂದಣಿ ಮಾಡಲು ಶಾಲೆಗಳಿಗೆ ಈ ವರ್ಷ ಸೆಪ್ಟಂಬರ್ 15 ತನಕ ಅವಕಾಶವಿದೆ ಎಂದರು.

ನೈತಿಕ ಹಾಗೂ ಮೌಲ್ಯಯುತ ಶಿಕ್ಷಣವು ಎಲ್ಲರ ಆದ್ಯತೆಯಾಗಿರಬೇಕು. ವಿದ್ಯಾರ್ಥಿಗಳನ್ನು ಸ್ಪರ್ಧೆಗೆ ಸಿದ್ಧಗೊಳಿಸುವ ಮತ್ತು ಪರೀಕ್ಷೆ ಬರೆಯುವಂತೆ ಪ್ರೇರೇಪಿಸುವ ಕಾರ್ಯ ನಡೆಯಬೇಕು. ಇದರಿಂದ ಸಾಕಷ್ಟು ವಿದ್ಯಾರ್ಥಿಗಳು ಶ್ರೇಯಸ್ಸು ಕಾಣಲು ಸಾಧ್ಯ ಎಂದು ರಾಜಲಕ್ಷ್ಮಿ ಹೇಳಿದರು.

ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು (ಆಡಳಿತ) ಗೋವಿಂದ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸಂತ ಅಲೋಶಿಯಸ್ ವಿವಿಯ ಉಪಕುಲಪತಿ ವಂ..ಪ್ರವೀಣ್ ಮಾರ್ಟಿಸ್ ಎಸ್.ಜೆ. ಭಾಗವಹಿಸಿದ್ದರು.

ಮಂಗಳೂರು ಉತ್ತರ ವಲಯ ಶಿಕ್ಷಣಾಧಿಕಾರಿ ಜೇಮ್ಸ್ ಕುಟಿನ್ಹೊ, ಉದ್ಯಮಿ ಅಗರಿ ರಾಘವೇಂದ್ರ ರಾವ್, ಕೊಡಿಯಾಲ್‌ಬೈಲ್ ಸಂತ ಅಲೋಶಿಯಸ್ ಪ್ರೌಢಶಾಲೆಯ ಉಪಮುಖ್ಯ ಶಿಕ್ಷಕಿ ಲ್ಯಾನ್ಸಿ ಡಿಸೋಜ, ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಭಾಸ್ಕರ ರೈ ಕಟ್ಟ, ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮುಹಮದ್ ರಿಯಾಝ್, ಜಿಲ್ಲಾ ಕೋಶಾಧಿಕಾರಿ ಧನರಾಜ್ ಡಿ.ಆರ್., ಜಿಲ್ಲಾ ಜೊತೆ ಕಾರ್ಯದರ್ಶಿ ಶಶಿಕಾಂತ್ ಸಿ., ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ಯಾಮಲಾ ಎಂ., ಆದಂ ಉಪಸ್ಥಿತರಿದ್ದರು.

ಸಂಘದ ಮಂಗಳೂರು ತಾಲೂಕು ಘಟಕದ ಅಧ್ಯಕ್ಷ ವಾಸುದೇವ ರಾವ್ ಕುಡುಪು ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಕಾರ್ಯದರ್ಶಿ ಚಿತ್ರಾಶ್ರೀ ಕೆ.ಎಸ್.ವರದಿ ವಾಚಿಸಿದರು. ಪ್ರವೀಣ್ ಕುಟಿನ್ಹೊ ವಂದಿಸಿದರು.

*ಮಂಗಳೂರು ಉತ್ತರ ವಲಯದ ಸರಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ 2024-25ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು, ಶೇ.100 ಫಲಿತಾಂಶ ಪಡೆದ ಶಾಲೆಗಳನ್ನು ಹಾಗೂ ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News