ದೀಪಾವಳಿ ಹಬ್ಬದ ಹಿನ್ನೆಲೆ ಮಂಗಳೂರು-ಬೆಂಗಳೂರು-ಹುಬ್ಬಳ್ಳಿ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಾಟ
ಸಾಂದರ್ಭಿಕ ಚಿತ್ರ
ಮಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮಂಗಳೂರು-ಬೆಂಗಳೂರು-ಹುಬ್ಬಳ್ಳಿ ನಡುವೆ ವಿಶೇಷ ರೈಲು ವ್ಯವಸ್ಥೆ ಕಲ್ಪಿಸುವಂತೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಮನವಿಗೆ ಸ್ಪಂದಿಸಿರುವ ರೈಲ್ವೆ ಸಚಿವಾಲಯವು ಹೊಸ ರೈಲು ಓಡಾಟಕ್ಕೆ ಮಂಜೂರು ಮಾಡಿದೆ.
ಹುಬ್ಬಳ್ಳಿ-ಮಂಗಳೂರು ವಿಶೇಷ ರೈಲು (07311/07312) ನವೆಂಬರ್ 2ರಂದು ಸಂಜೆ 4ಕ್ಕೆ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು ರಾತ್ರಿ 11:25ಕ್ಕೆ ಯಶವಂತಪುರ ಮತ್ತು ಮರುದಿನ ಪೂ.11:45ಕ್ಕೆ ಮಂಗಳೂರು ತಲುಪಲಿದೆ.
ಈ ರೈಲು ಮಂಗಳೂರು-ಹುಬ್ಬಳ್ಳಿ (ನಂ.07312) ಮರುದಿನ ಅಂದರೆ ನ.3ರಂದು ಮಧ್ಯಾಹ್ನ 1 ಗಂಟೆಗೆ ಮಂಗಳೂರಿನಿಂದ ಹೊರಟು ರಾತ್ರಿ 10 ಗಂಟೆಗೆ ಯಶವಂತಪುರ ಮತ್ತು ಮರುದಿನ ಬೆಳಗ್ಗೆ 7ಕ್ಕೆ ಹುಬ್ಬಳ್ಳಿ ತಲುಪಲಿದೆ.
ಕರಾವಳಿಯ ಅಪಾರ ಸಂಖ್ಯೆಯ ಜನರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ದಸರಾ, ದೀಪಾವಳಿ ಮುಂತಾದ ಹಬ್ಬಗಳ ಸಂದರ್ಭ ಅಧಿಕ ಸಂಖ್ಯೆಯಲ್ಲಿ ಮಂಗಳೂರು ಮತ್ತು ಬೆಂಗಳೂರು ನಡುವೆ ಓಡಾಡುವುದು ಸಾಮಾನ್ಯವಾಗಿದೆ. ಹಬ್ಬದ ಅವಧಿಯಲ್ಲಿ ಪ್ರಯಾಣಿಕರ ದಟ್ಟಣೆ ಜಾಸ್ತಿಯಾಗಿ ಬಸ್‌ಗಳಲ್ಲಿ ಟಿಕೆಟ್ ಲಭಿಸದೆ ಊರಿಗೆ ಬಂದು ಹೋಗುವುದಕ್ಕೆ ಸಮಸ್ಯೆಯಾಗುತ್ತದೆ. ಆದ್ದರಿಂದ ದೀಪಾವಳಿ ಸಂದರ್ಭ ಉಭಯ ನಿಲ್ದಾಣಗಳ ನಡುವೆ ಸ್ಪೆಷಲ್ ರೈಲು ಒದಗಿಸುವಂತೆ ಸಂಸದರು ಮನವಿ ಮಾಡಿದ್ದರು.
ಈ ಮನವಿಗೆ ಸ್ಪಂದಿಸಿರುವ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಕ್ಯಾ. ಬ್ರಿಜೇಶ್ ಚೌಟ ಕೃತಜ್ಞತೆ ಸಲ್ಲಿಸಿದ್ದಾರೆ.