×
Ad

ಎಸ್ಸೆಸ್ಸೆಫ್ ರಾಷ್ಟ್ರೀಯ ಸಾಹಿತ್ಯೋತ್ಸವ ಸಮಾರೋಪ: ಕರ್ನಾಟಕಕ್ಕೆ ಚಾಂಪಿಯನ್ ಪಟ್ಟ

Update: 2025-11-16 19:54 IST

ಗುಲ್ಬರ್ಗಾ : ಉತ್ತರ ಕರ್ನಾಟಕದ ಗುಲ್ಬರ್ಗಾದಲ್ಲಿ ನಡೆದ ಎಸ್ಸೆಸ್ಸೆಫ್ ರಾಷ್ಟ ಮಟ್ಟದ ಸಾಹಿತ್ಯೋತ್ಸವವು ದೇಶದ ಮೂಲೆಮೂಲೆಗಳಿಂದ ಬಂದ 2,000ಕ್ಕೂ ಹೆಚ್ಚು ಯುವ ಪ್ರತಿಭೆಗಳ ಭಾಗವಹಿಸುವಿಕೆಯಿಂದ ಯಶಸ್ವಿಯಾಗಿ ಸಂಪನ್ನವಾಯಿತು.

ವಿವಿಧ ಕಲೆ ಹಾಗೂ ಸಾಹಿತ್ಯ ಸ್ಪರ್ಧೆಗಳಲ್ಲಿ ಅತೀ ಹೆಚ್ಚು ಅಂಕಗಳೊಂದಿಗೆ ಕರ್ನಾಟಕವು ಚಾಂಪಿಯನ್ ಪಟ್ಟಗಳಿಸಿತು. ಕೇರಳ ಮತ್ತು ಜಮ್ಮು-ಕಾಶ್ಮೀರ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆದವು.

ವೈಯಕ್ತಿಕ ವಿಭಾಗಗಳಲ್ಲಿ ದೆಹಲಿಯ ಮುಹಮ್ಮದ್ ಅಶ್ಹಾದ್ ಅವರು ಕ್ಯಾಂಪಸ್ ಬಾಯ್ಸ್ ವಿಭಾಗದ “ಪೆನ್ ಆಫ್ ದ ಫೆಸ್ಟ್” ಆಗಿ ಆಯ್ಕೆಯಾದರೆ ಅಬ್ದುರ್ ರಶೀದ್ ಅವರನ್ನು ಸಾಮಾನ್ಯ ವಿಭಾಗದ “ಸ್ಟಾರ್ ಆಫ್ ದ ಫೆಸ್ಟ್” ಆಗಿ ಘೋಷಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಕಲಾ ಶಾಲೆ ವೇದಿಕೆಯಲ್ಲಿ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿ ಕ್ಷೇತ್ರಗಳ ಗಣ್ಯ ವ್ಯಕ್ತಿಗಳಿಂದ ಹಲವು ಕಲಿಕಾ ಕಾರ್ಯಾಗಾರಗಳು ನಡೆದವು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಮದನಗೂಡು ಚಿನ್ನಸ್ವಾಮಿ, ಸಮಾಜಸೇವಕ ಮತ್ತು ಸಾಹಿತ್ಯಕಾರ ಮುಹಮ್ಮದ್ ಅಮ್ಜದ್ ಹುಸೈನ್, ಉರ್ದು ಲೇಖಕ ಸೈಯದ್ ಹುಸೈನಿ ಪೀರನ್ ಸಾಹಬ್ ಕಾರ್ಯಾಗಾರ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಮತ್ತು ಸಾಹಿತ್ಯಾಸಕ್ತರು ದೊಡ್ಡ ಸಂಖ್ಯೆಯಲ್ಲಿ ಈ ಕಾರ್ಯಾಗಾರದಲ್ಲಿ ಭಾಗವಹಿಸಿದರು. ವಿದ್ಯಾರ್ಥಿಗಳು ತಮಗೆ ಸೂಕ್ತವಾದ ವೃತ್ತಿ ಆಯ್ಕೆಗಳನ್ನು ಆಯ್ದುಕೊಳ್ಳಲು ರೂಪಿಸಲಾದ ಎಜುಕೈನ್ ಕರಿಯರ್ ಕ್ಲಿನಿಕ್ ಕೂಡ ವಿಶೇಷ ಗಮನಸೆಳೆಯಿತು.

ಸಮಾರೋಪ ಸಮಾರಂಭಕ್ಕೆ ಫಕೀಹುಲ್ ಉಮರ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಡಾ.ಕಮರುಜ್ಜಮಾನ್ ಹುಸೈನೀ ಇನಾಂದಾರ್ ಉದ್ಘಾಟಿಸಿದರು. ಡಾ.ಶೇಖ್ ಶಾ ಮುಹಮ್ಮದ್ ಅಫ್ಜಲುದ್ದೀನ್, ಉಬೈದುಲ್ಲಾ ಸಖಾಫಿ, ದಿಲ್‌ಷಾದ್ ಅಹ್ಮದ್, ಇಬ್ರಾಹಿಂ ಸಖಾಫಿ ಮತ್ತು ಶರೀಫ್ ನಿಜಾಮಿ ಅವರು ಉಪಸ್ಥಿತರಿದ್ದರು. ಸಲ್ಮಾನ್ ಖುರ್ಶೀದ್ ಮಣಿಪುರ ಸ್ವಾಗತಿಸಿ ಸ್ವಾದಿಕ್ ಅಲಿ ಬುಖಾರಿ ಧನ್ಯವಾದವಿತ್ತರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News