ಅಂತಾರಾಷ್ಟ್ರೀಯ ಸಮುದಾಯ ಜವಾಬ್ದಾರಿಯಿಂದ ವರ್ತಿಸಬೇಕು: ಎಸ್‌ವೈಎಸ್
ಮಂಗಳೂರು, ಅ.13: ಕೆಲವು ದಿನಗಳಿಂದ ಭೀಕರ ಸ್ವರೂಪ ಪಡೆಯುತ್ತಿರುವ ಇಸ್ರೇಲ್-ಫೆಲೆಸ್ತೀನ್ ಯುಧ್ದವು ಸಹಸ್ರಾರು ನಾಗರಿಕರನ್ನು ಬಲಿ ತೆಗೆದುಕೊಳ್ಳುತ್ತಿದ್ದು, ಅಂತಾರಾಷ್ಟ್ರೀಯ ಸಮುದಾಯ ತಕ್ಷಣ ಎಚ್ಚೆತ್ತುಕೊಂಡು ಜವಾಬ್ದಾರಿಯುತ ವಾಗಿ ವರ್ತಿಸಬೇಕು ಎಂದು ಸುನ್ನೀ ಯುವಜನ ಸಂಘ (ಎಸ್‌ವೈಎಸ್) ರಾಜ್ಯ ಸಮಿತಿ ಆಗ್ರಹಿಸಿದೆ.
ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವಿನ ಶಾಂತಿ ಸಂಸ್ಥಾಪನೆಗಾಗಿ ಹಲವು ಒಪ್ಪಂದಗಳು ನಡೆದಿದ್ದರೂ ಇಸ್ರೇಲ್ ಅದನ್ನು ಉಲ್ಲಂಘಿಸುತ್ತಾ ಬಂದಿದೆ. ಈ ಮಧ್ಯೆ ಸ್ವಂತ ನೆಲದಿಂದ ಅನ್ಯಾಯವಾಗಿ ಹೊರದಬ್ಬಲ್ಪಡುವ ಫೆಲೆಸ್ತೀನಿಯರ ಹಕ್ಕುಗಳ ಮರು ಸ್ಥಾಪನೆಗೆ ನ್ಯಾಯೋಚಿತ ಮಧ್ಯಸ್ಥಿಕೆ ವಹಿಸಲು ಅರಬ್-ಇಸ್ಲಾಮಿಕ್ ರಾಷ್ಟ್ರಗಳು ಮತ್ತು ಜಗತ್ತಿನ ಇತರ ಪ್ರಬಲ ರಾಷ್ಟ್ರಗಳು ವಿಶೇಷ ಮುತುವರ್ಜಿ ವಹಿಸಬೇಕು ಎಂದು ಅದು ಕರೆನೀಡಿದೆ.
ನಿರಾಯುಧರಾದ ಜನಸಾಮಾನ್ಯರನ್ನು ಗುರಿಯಾಗಿಟ್ಟು ನಡೆಸುವ ಯಾವುದೇ ಯುಧ್ದಗಳು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಇಸ್ರೇಲ್ ತನ್ನ ಕ್ರೌರ್ಯವನ್ನು ಕೊನಗೊಳಿಸಲು ಮುಂದಾಗಬೇಕೆಂದು ಎಸ್‌ವೈಎಸ್ ಒತ್ತಾಯಿಸಿದೆ.
ಮಂಗಳೂರಿನಲ್ಲಿ ನಡೆದ ರಾಜ್ಯ ಸಮಿತಿ ಸಭೆಯಲ್ಲಿ ರಾಜ್ಯಾಧ್ಯಕ್ಷ ಅಬ್ದುಲ್ ಹಫೀಳ್ ಸಅದಿ ಅಧ್ಯಕ್ಷತೆ ವಹಿಸಿದ್ದರು. ನಿಕಟ ಪೂರ್ವ ರಾಜ್ಯಾಧ್ಯಕ್ಷ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸಯ್ಯಿದ್ ಶಾಫಿ ತಂಳ್, ಸಯ್ಯಿದ್ ಹಾಮೀಂ ತಂಳ್, ಅಡ್ವೊಕೇಟ್ ಹಂಝತ್ ಉಡುಪಿ, ಅಬ್ದುಲ್ ರಹ್ಮಾನ್ ರಝ್ವಿ, ಹಸೈನಾರ್ ಆನೆಮಹಲ್, ಇಬ್ರಾಹೀಂ ಖಲೀಲ್ ಮಾಲಿಕಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಎಂ.ಬಿ.ಎಂ.ಸ್ವಾದಿಕ್ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಕೆ.ಎಂ. ಅಬೂಬಕರ್ ಸಿದ್ದೀಕ್ ವಂದಿಸಿದರು.