×
Ad

ಜಾರ್ಖಂಡ್ ಸಚಿವ ಮೃತಪಟ್ಟ ಎರಡು ತಿಂಗಳ ನಂತರ ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿರುವ ಪತ್ನಿ

Update: 2023-07-02 18:08 IST

Photo-Twitter@Jagarnathji_mla

ರಾಂಚಿ: ಹೇಮಂತ್ ಸೊರೇನ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಮಾಜಿ ಸಚಿವ ಜಾಗರ್‌ನಾಥ್ ಮಹ್ತೊರ ಪತ್ನಿ ಬೇಬಿ ದೇವಿ ಸೋಮವಾರ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಜಾರ್ಖಂಡ್ ಮುಕ್ತಿ ಮೋರ್ಚಾದ ನಾಯಕರೊಬ್ಬರು ರವಿವಾರ ತಿಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಅಬಕಾರಿ ಖಾತೆಗಳನ್ನು ಹೊಂದಿದ್ದ ಜಾಗರ್‌ನಾಥ್ ಮಹ್ತೊ ಮೃತಪಟ್ಟ ನಂತರ ಹೇಮಂತ್ ಸೊರೇನ್ ಅವರ ಸಚಿವ ಸಂಪುಟದಲ್ಲಿ ಒಂದು ಸಚಿವ ಸ್ಥಾನ ಖಾಲಿ ಇತ್ತು.

ಸೋಮವಾರ ಮಧ್ಯಾಹ್ನದ ಹೊತ್ತಿಗೆ ಪ್ರಮಾಣ ವಚನ ಸಮಾರಂಭವು ರಾಜಭವನದಲ್ಲಿ ನಡೆಯಲಿದೆ ಎಂದು ಜೆಎಂಎಂ ನಾಯಕ ತಿಳಿಸಿದ್ದಾರೆ.

"ರಾಜಭವನದಲ್ಲಿ ಹಮ್ಮಿಕೊಳ್ಳಲಾಗಿರುವ ಸಮಾರಂಭದಲ್ಲಿ ರಾಜ್ಯಪಾಲರಾದ ಸಿ.ಪಿ.ರಾಧಾಕೃಷ್ಣನ್ ಅವರು ಬೇಬಿ ದೇವಿ ಅವರಿಗೆ ಪ್ರತಿಜ್ಞಾ ವಿಧಿ ಹಾಗೂ ಗೋಪ್ಯತಾ ಪ್ರಮಾಣ ವಚನವನ್ನು ಬೋಧಿಸಲಿದ್ದಾರೆ. ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳೂ ಪಾಲ್ಗೊಳ್ಳಲಿದ್ದಾರೆ" ಎಂದು ಜೆಎಂಎಂ ಕೇಂದ್ರ ಸಮಿತಿಯ ಸದಸ್ಯ ವಿನೋದ್ ಪಾಂಡೆ PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಗಿರಿಡಿಹ್ ಜಿಲ್ಲೆಯ ಡುಮ್ರಿ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಜೆಎಂಎಂ ಶಾಸಕರಾಗಿದ್ದ ಜಾಗರ್‌ನಾಥ್ ಮಹ್ತೊ ಅವರು ಎಪ್ರಿಲ್ 6ರಂದು ಚೆನ್ನೈ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುವಾಗ ನಿಧನರಾಗಿದ್ದರು.

ಮಾಜಿ ಸಚಿವರ ನಿಧನದ ನಂತರ ಡುಮ್ರಿ ವಿಧಾನಸಭಾ ಕ್ಷೇತ್ರವು ತೆರವುಗೊಂಡಿತ್ತು. ಈ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯಲ್ಲಿ ಬೇಬಿ ದೇವಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಜೆಎಂಎಂ ನಾಯಕ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News