ಅಸ್ಸಾಂ: ಭಾರೀ ಮಳೆಗೆ ಉರುಳಿ ಬಿದ್ದ ಮರಗಳು; ಪ್ರತ್ಯೇಕ ಘಟನೆಗಳಲ್ಲಿ ಒಬ್ಬ ವಿದ್ಯಾರ್ಥಿ ಸಾವು, 12 ಮಂದಿಗೆ ಗಾಯ
Update: 2024-05-28 17:58 IST
Photo : PTI
ಗುವಾಹಟಿ : ಅಸ್ಸಾಂನಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆ ಜನಜೀವನ ಅಸ್ತವ್ಯಸ್ತಗೊಂಡಿದ್ದು ಮಳೆ ಸಂಬಂಧಿ ಅನಾಹುತಗಳಲ್ಲಿ ಒಬ್ಬ ವಿದ್ಯಾರ್ಥಿ ಮೃತಪಟ್ಟರೆ, ಇನ್ನೊಂದು ಘಟನೆಯಲ್ಲಿ 12 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಮೊರಿಗಾಂವ್ ಜಿಲ್ಲೆಯ ದಿಘಲ್‌ಬೊರಿ ಎಂಬಲ್ಲಿ ಚಲಿಸುತ್ತಿದ್ದ ಆಟೋರಿಕ್ಷಾ ಮೇಲೆ ಮರವೊಂದು ಉರುಳಿ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಸೋನಿತ್‌ಪುರ್ ಜಿಲ್ಲೆಯಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ಶಾಲಾ ಬಸ್ ಒಂದರ ಮೇಲೆ ಮರ ಉರುಳಿ ಬಿದ್ದ ಪರಿಣಾಮ 12 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಬಿರುಗಾಳಿಗೆ ರಾಜ್ಯದ ಹಲವೆಡೆ ಮರಗಳು ಉರುಳಿ ಬಿದ್ದಿವೆ ಹಾಗೂ ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. ಹಲವೆಡೆ ಮಳೆಯಿಂದಾಗಿ ಕೃತಕ ನೆರೆ ಸೃಷ್ಟಿಯಾಗಿದೆ ಎಂದು ತಿಳಿದು ಬಂದಿದೆ.