ಜಮ್ಮುವಿನಲ್ಲಿ ಭಾರೀ ಮಳೆ, ಭೂಕುಸಿತ; ಕನಿಷ್ಠ 4 ಮಂದಿ ಮೃತ್ಯು, ವೈಷ್ಣೋದೇವಿ ಯಾತ್ರೆ ಸ್ಥಗಿತ
ಜಮ್ಮು, ಆ. 26: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಭಾರೀ ಮಳೆಗೆ ಭೂಕುಸಿತ ಸಂಭವಿಸಿದೆ. ಹಠಾತ್ ಪ್ರವಾಹವುಂಟಾಗಿ ಮನೆಗಳಿಗೆ ಹಾನಿಯಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಇತ್ತೀಚಿನ ವರದಿಗಳ ಪ್ರಕಾರ, ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ.
ಹಲವಾರು ಪ್ರದೇಶಗಳಲ್ಲಿ ಮನೆಗಳು ಹಾಗೂ ರಸ್ತೆಗೆ ಭಾರೀ ಹಾನಿಯಾಗಿದೆ. ಮನೆ ಕುಸಿತದಿಂದ ಇಬ್ಬರು ಮತ್ತು ಹಠಾತ್ ಪ್ರವಾಹದಲ್ಲಿ ಇನ್ನಿಬ್ಬರು ಮೃತಪಟ್ಟಿದ್ದಾರೆ. ಮೇಘಸ್ಫೋಟದ ಪ್ರಕರಣವೂ ವರದಿಯಾಗಿದೆ. ಜಿಲ್ಲಾಡಳಿತವು ನಾಗರಿಕರಿಗೆ ನದಿ ದಂಡೆಗಳು ಹಾಗೂ ತಗ್ಗು ಪ್ರದೇಶಗಳಿಂದ ದೂರವಿದ್ದು, ಜಾಗರೂಕರಾಗಿರಲು ತುರ್ತು ಎಚ್ಚರಿಕೆ ನೀಡಿದೆ ಎಂದು ಸ್ಥಳೀಯ ಆಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.
ದೋಡಾ ಮತ್ತು ಕಿಶ್ತ್ವಾರ್ ಜಿಲ್ಲೆಗಳನ್ನು ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ – NH 244 ಭೂಕುಸಿತದಿಂದಾಗಿ ಸಂಪೂರ್ಣ ಬಂದ್ ಮಾಡಲಾಗಿದೆ. ರಸ್ತೆಯ ಮೇಲೆ ಭಾರಿ ಪ್ರಮಾಣದಲ್ಲಿ ಕಲ್ಲು ಬಂಡೆಗಳು ಬಿದ್ದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ವಾಹನ ಚಾಲಕರಿಗೆ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚಿಸಲಾಗಿದೆ.
ಪ್ರಸಿದ್ಧ ವೈಷ್ಣೋದೇವಿ ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಅಧ್ಕ್ವರಿಯಲ್ಲಿರುವ ಇಂದರ್ಪ್ರಸ್ಥ ಭೋಜನಾಲಯದ ಬಳಿ ಭೂಕುಸಿತ ಸಂಭವಿಸಿದ್ದು, ಹಲವರಿಗೆ ಗಾಯವಾಗಿದೆ ಎನ್ನಲಾಗಿದೆ. ರಕ್ಷಣಾ ಸಿಬ್ಬಂದಿ ಮತ್ತು ಯಂತ್ರೋಪಕರಣಗಳ ನೆರವಿನಿಂದ ತುರ್ತು ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ದೇಗುಲ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ. ಶ್ರೀನಗರದಿಂದ ಜಮ್ಮುವಿಗೆ ಅವರು ತುರ್ತು ವಿಮಾನದಲ್ಲಿ ತೆರಳುವ ನಿರ್ಧಾರ ಕೈಗೊಂಡಿದ್ದಾರೆ."
ಜಿಲ್ಲಾಧಿಕಾರಿಗಳಿಗೆ ತುರ್ತು ಪರಿಹಾರ ಕ್ರಮಗಳಿಗಾಗಿ ಹೆಚ್ಚುವರಿ ಹಣ ಬಿಡುಗಡೆ ಮಾಡಲು ಸೂಚಿಸಲಾಗಿದೆ. ರಕ್ಷಣಾ ಕಾರ್ಯಗಳನ್ನು ತ್ವರಿತಗೊಳಿಸಲು ಎಲ್ಲಾ ಇಲಾಖೆಗಳು ಸಂಪೂರ್ಣ ಸಜ್ಜಾಗಿರಬೇಕು" ಎಂದು ಉಮರ್ ಅಬ್ದುಲ್ಲಾ ಸೂಚನೆ ನೀಡಿದ್ದಾರೆ.
ತಾವಿ ಮತ್ತು ರಾವಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಕಥುವಾ ಜಿಲ್ಲೆಯ ತಗ್ಗು ಪ್ರದೇಶಗಳು ಪ್ರವಾಹಕ್ಕೆ ಸಿಲುಕಿವೆ. ಹವಾಮಾನ ಇಲಾಖೆ ಮುಂದಿನ ಕೆಲವು ದಿನಗಳಲ್ಲಿ ಇನ್ನಷ್ಟು ಭಾರೀ ಮಳೆಯ ಸಾಧ್ಯತೆ ಇರುವುದಾಗಿ ಎಚ್ಚರಿಕೆ ನೀಡಿದೆ.
ಕಾಶ್ಮೀರ ಕಣಿವೆಯನ್ನು ಕಿಶ್ತ್ವಾರ್ ಜಿಲ್ಲೆಗೆ ಸಂಪರ್ಕಿಸುವ ಸಿಂಥನ್ ಟಾಪ್ ಪಾಸ್ ಮುಚ್ಚಲಾಗಿದೆ.
ಝೋಝಿಲಾ ಪಾಸ್ ನಲ್ಲಿ ಭಾರೀ ಹಿಮಪಾತದಿಂದ ಶ್ರೀನಗರ-ಲೇಹ್ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದೆ.
ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ರಕ್ಷಣಾ ಸಿಬ್ಬಂದಿ, SDRF, NDRF ಹಾಗೂ ಸ್ಥಳೀಯ ಆಡಳಿತವು ರಕ್ಷಣಾ ಕಾರ್ಯ ನಿರ್ವಹಿಸುತ್ತಿವೆ. ನಾಗರಿಕರಿಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಮನವಿ ಮಾಡಲಾಗಿದೆ.