ಬಿಹಾರ ಮತ ಪಟ್ಟಿ ಪರಿಷ್ಕರಣೆ ವೇಳೆ ಪತ್ತೆಯಾಗದ 11 ಸಾವಿರ ಮಂದಿ ಅಕ್ರಮ ವಲಸಿಗರು!
ಹೊಸದಿಲ್ಲಿ: ಚುನಾವಣಾ ಆಯೋಗ ಕೈಗೊಂಡಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಕೇವಲ 32 ಲಕ್ಷ ಮಂದಿ ಮಾತ್ರ ತಮ್ಮ ದಾಖಲೆಗಳನ್ನು ಸಲ್ಲಿಸಬೇಕಾಗಿದೆ. ಏತನ್ಮಧ್ಯೆ ಚುನಾವಣಾ ಆಯೋಗ ಶನಿವಾರ ಪ್ರಕಟಿಸಿದ ಪ್ರಕಾರ 11 ಸಾವಿರ ಮಂದಿ ಇದುವರೆಗೆ ಪತ್ತೆಯಾಗಿಲ್ಲ. ಈ ವರ್ಗದಲ್ಲಿ ಬರುವವರು ಬಹುಶಃ ಅಕ್ರಮವ ವಲಸೆಗಾರರಾಗಿದ್ದು, ಬಿಹಾರದ ಹೊರಗೆ ವಾಸವಿದ್ದು, ನಕಲಿ ಮತ ಚಲಾಯಿಸುವ ಸಲುವಾಗಿ ನೋಂದಾಯಿಸಿಕೊಂಡಿದ್ದರು ಎಂದು ಮೂಲಗಳು ಹೇಳಿವೆ.
"ಪತ್ತೆಯಾಗದ ವ್ಯಕ್ತಿಗಳು" ಎಂದರೆ ಮತದಾರರ ದಾಖಲಾದ ವಿಳಾಸಕ್ಕೆ ಬೂತ್ ಮಟ್ಟದ ಅಧಿಕಾರಿಗಳು ಮೂರು ಬಾರಿ ಭೇಟಿ ನೀಡಿದಾಗಲೂ ಅವರು ಆ ವಿಳಾಸದಲ್ಲಿ ಇಲ್ಲ ಮತ್ತು ಅಕ್ಕಪಕ್ಕದವರಿಗೂ ಅವರು ಅಲ್ಲಿ ವಾಸವಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಮೂಲಗಳು ವಿವರಿಸಿವೆ. ಕೆಲವು ಪ್ರಕರಣಗಳಲ್ಲಿ ಅಲ್ಲಿ ಮನೆ ಅಥವಾ ವಾಸದ ಸುಳಿವು ಕೂಡಾ ಕಾಣುತ್ತಿಲ್ಲ ಎಂದು ಹೇಳಲಾಗಿದೆ.
"ಬಹುಶಃ ಇವರು ಅಕ್ರಮ ವಲಸಿಗರಾಗಿದ್ದು, ಬಾಂಗ್ಲಾದೇಶಿಗಳು ಅಥವಾ ರೋಹಿಂಗ್ಯಾ ಜನರಾಗಿರಬೇಕು. ಅಕ್ಕಪಕ್ಕದ ರಾಜ್ಯಗಳಲ್ಲಿ ವಾಸವಿದ್ದು, ಬಿಹಾರದಿಂದ ಮತದಾರರ ಗುರುತಿನ ಚೀಟಿ ಪಡೆದಿರುವ ಸಾಧ್ಯತೆ ಇದೆ. ಮತಪಟ್ಟಿ ಪರಿಷ್ಕರಣೆ ವೇಳೆ ಅಗತ್ಯ ತಪಾಸಣೆಗಳು ಇಲ್ಲದ ಹಿನ್ನೆಲೆಯಲ್ಲಿ ಅಥವಾ ಲಂಚದ ವಿಧಾನದ ಮೂಲಕ ಮತಪಟ್ಟಿಯಲ್ಲಿ ನೋಂದಾಯಿಸಿಕೊಂಡಿರುವ ಸಾಧ್ಯತೆ ಇದೆ" ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಇವರು ಚುನಾವಣೆ ವೇಳೆ ನಕಲಿ ಮತದಾನ ಮಾಡುವ ಅಪಾಯ ಇತ್ತು ಎಂದಿದ್ದಾರೆ.
ಬಿಹಾರದಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಕಡ್ಡಾಯ ಮೂರು ಬಾರಿ ಭೇಟಿ ನೀಡಿದಾಗ ಸುಮಾರು 41.6 ಲಕ್ಷ ಮತದಾರರು ಅಂದರೆ ಶೇಕಡ 5.3ರಷ್ಟು ಮಂದಿ ಅವರ ವಿಳಾಸದಲ್ಲಿ ಇರಲಿಲ್ಲ. ಇವರಲ್ಲಿ 14.3 ಲಕ್ಷ ಮಂದಿ (ಶೇಕಡ 1.8) ಮೃತಪಟ್ಟಿರಬೇಕು. 19.7 ಲಕ್ಷ ಮಂದಿ (ಶೇ 2.5%) ಬಹುಶಃ ಕಾಯಂ ಆಗಿ ಸ್ಥಳಾಂತರಗೊಂಡಿರಬೇಕು. 7.5 ಲಕ್ಷ ಮಂದಿ ಅಥವಾ ಅಥವಾ ಶೇಕಡ 0.9 ರಷ್ಟು ಮಂದಿ ಹಲವು ಕಡೆಗಳಲ್ಲಿ ನೋಂದಣಿ ಮಾಡಿಕೊಂಡಿರಬೇಕು. 11 ಸಾವಿರ ಮಂದಿ ಪತ್ತೆಯಾಗಿಲ್ಲ ಎಂದು ಅವರು ವಿವರ ನೀಡಿದ್ದಾರೆ.