×
Ad

ಉಮ್ರಾ ಪ್ರಯಾಣಿಕರಿದ್ದ ಬಸ್ ಗೆ ಬೆಂಕಿ ಹೊತ್ತಿಕೊಂಡು ಉರಿಯುತ್ತಿದ್ದರೂ ಚಾಲಕ ಸಹಾಯಕ್ಕೆ ಬರಲೇ ಇಲ್ಲ!

ತಾಯ್ನಾಡಿಗೆ ಮರಳಿದ ಮದೀನಾದಲ್ಲಿ ಭೀಕರ ಬಸ್ ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ

Update: 2025-12-05 08:50 IST

PC: screengrab/x.com/PTI_News

ಹೈದರಾಬಾದ್: ಸೌದಿ ಅರೇಬಿಯಾದ ಮದೀನಾದಲ್ಲಿ ನಡೆದ ಭೀಕರ ಬಸ್ ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಮುಹಮ್ಮದ್ ಅಬ್ದುಲ್ ಶುಹೈಬ್ ತಾಯ್ನಾಡು ಹೈದರಾಬಾದ್ ಗೆ ಹಿಂದಿರುಗಿದ್ದಾರೆ.

ಸುಮಾರು 45 ಅಮಾಯಕ ಜೀವಗಳನ್ನು ಆಹುತಿ ಪಡೆದ ಘಟನೆಗೆ ಸಾಕ್ಷಿಯಾಗಿರುವ ಹೈದರಾಬಾದ್‌ ನ ಮುಹಮ್ಮದ್ ಅಬ್ದುಲ್ ಶುಹೈಬ್ ಘಟನೆಯ ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ.

ಉಮ್ರಾ ಮುಗಿಸಿ ನಾವು ಮಕ್ಕಾದಿಂದ ಬದ್ರ್‌ಗೆ ತೆರಳಿದ್ದೆವು. ಅಲ್ಲಿ ನಮಾಝ್ ಮಾಡಿದ ಬಳಿಕ ನಮ್ಮ ಬಸ್ ಮದೀನಾದತ್ತ ಪ್ರಯಾಣಿಸುತ್ತಿತ್ತು. ಆಗ ಒಬ್ಬ ಪ್ರಯಾಣಿಕ ಬಸ್ ಡ್ರೈವರ್‌ ಗೆ ಶೌಚಾಲಯಕ್ಕೆ ಹೋಗಲು ಬಸ್ ನಿಲ್ಲಿಸಲು ಕೇಳಿದರು. ಬಸ್ ನಿಲ್ಲುತ್ತಿದ್ದಂತೆ, ಹಿಂಭಾಗದಿಂದ ಒಂದು ಟ್ಯಾಂಕರ್ ಬಂದು ಬಸ್‌ ಗೆ ಗುದ್ದಿತು. ಢಿಕ್ಕಿಯಾದ ತಕ್ಷಣವೇ, ಬಸ್ ಚಾಲಕ ಕಿಟಕಿಯಿಂದ ತಪ್ಪಿಸಿಕೊಂಡು ಓಡಿಹೋದರು. ಅವರು ಪ್ರಯಾಣಿಕರಿಗೆ ಸಹಾಯ ಮಾಡಲು ಪ್ರಯತ್ನಿಸಲೂ ಇಲ್ಲ. ಬೆಂಕಿ ವೇಗವಾಗಿ ಹರಡಿತು. ಆಗ ನಾನು ಕೂಡ ಅದೇ ಕಿಟಕಿಯಿಂದ ಹೊರಗೆ ಹಾರಲು ಯತ್ನಿಸಿದೆ. ಆದರೆ, ಆಗಲೇ ನನ್ನ ಬಟ್ಟೆಗಳಿಗೆ ಬೆಂಕಿ ತಗುಲಿತ್ತು.

ಈ ದುರಂತದಲ್ಲಿ ಬಸ್‌ನಲ್ಲಿದ್ದ 46 ಪ್ರಯಾಣಿಕರಲ್ಲಿ ಶುಹೈಬ್ ಒಬ್ಬರೇ ಜೀವಂತವಾಗಿ ಉಳಿದಿದ್ದಾರೆ. ಉಳಿದ 45 ಜನರು ಮೃತಪಟ್ಟಿದ್ದಾರೆ. ಈ ದುರಂತದಲ್ಲಿ ಶುಹೈಬ್ ತನ್ನ ತಂದೆ, ತಾಯಿ ಮತ್ತು ಅಜ್ಜ ಸೇರಿದಂತೆ ಇಡೀ ಕುಟುಂಬವನ್ನೇ ಕಳೆದುಕೊಂಡಿದ್ದಾರೆ. ಒಂದೇ ಕುಟುಂಬದ 18 ಸದಸ್ಯರು ಈ ಬಸ್‌ನಲ್ಲಿದ್ದರು, ಅವರೆಲ್ಲರೂ ದುರಂತದಲ್ಲಿ ಮೃತಪಟ್ಟಿದ್ದಾರೆ.

ನಾನು ನನ್ನವರನ್ನು ಕಳೆದುಕೊಂಡಿದ್ದೇನೆ. ನನಗೆ ಈಗ ಯಾವುದೇ ಆಧಾರ ಉಳಿದಿಲ್ಲ. ನನಗೀಗ ಬೆಂಬಲ ಬೇಕಿದೆ. ಆದ್ದರಿಂದ ನನಗೆ ಸರ್ಕಾರಿ ಉದ್ಯೋಗ ಕೊಡಿ ಎಂದು ತೆಲಂಗಾಣ ಸರ್ಕಾರವನ್ನು ಕೇಳಿಕೊಂಡಿದ್ದೇನೆ ಎಂದು ಶುಹೈಬ್ ಹೇಳಿದ್ದಾರೆ.

54 ಜನರ ತಂಡ ಉಮ್ರಾ ಯಾತ್ರೆಗಾಗಿ ನವೆಂಬರ್ 9ರಂದು ಹೈದರಾಬಾದ್‌ನಿಂದ ಸೌದಿಗೆ ತೆರಳಿತ್ತು. ಆ ಪೈಕಿ 46 ಮಂದಿ ಒಂದೇ ಬಸ್‌ನಲ್ಲಿದ್ದರು. ನ. 17ರಂದು ಮದೀನಾ ಬಳಿ ಈ ಬಸ್ ದುರಂತ ನಡೆದಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News