2019-23ರ ನಡುವೆ ಯುಎಪಿಎ ಅಡಿ 10,440 ಜನರ ಬಂಧನ, ಕೇವಲ 335 ಜನರಿಗೆ ಶಿಕ್ಷೆ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: 2019-23ರ ನಡುವೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ (ಯುಎಪಿಎ) ಒಟ್ಟು 10,440 ಜನರನ್ನು ಬಂಧಿಸಲಾಗಿದೆ ಎಂದು ಕೇಂದ್ರ ಸರಕಾರವು ಸಂಸತ್ತಿನಲ್ಲಿ ತಿಳಿಸಿದೆ. ಈ ಪೈಕಿ ಕೇವಲ 335 ಜನರು ಶಿಕ್ಷೆಗೆ ಗುರಿಯಾಗಿದ್ದಾರೆ.
ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು ಲೋಕಸಭೆಯಲ್ಲಿ ಮಂಡಿಸಿದ ಅಂಕಿಅಂಶಗಳ ಪ್ರಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಜಮ್ಮುಕಾಶ್ಮೀರದಲ್ಲಿ ಯುಎಪಿಎ ಅಡಿ ಅತ್ಯಂತ ಹೆಚ್ಚಿನ,3,662 ಜನರನ್ನು ಬಂಧಿಸಲಾಗಿದೆ. ಆದಾಗ್ಯೂ ಶಿಕ್ಷೆಯಾಗಿರುವುದು 23 ಜನರಿಗೆ ಮಾತ್ರ.
ಈ ಅವಧಿಯಲ್ಲಿ ಎರಡನೇ ಅತಿ ಹೆಚ್ಚು ಬಂಧನಗಳು (2,805) ಉತ್ತರ ಪ್ರದೇಶದಲ್ಲಿ ನಡೆದಿದ್ದು, 222 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ.
ಅತಿ ಹೆಚ್ಚು ಬಂಧನಗಳಾಗಿರುವ ಇತರ ರಾಜ್ಯಗಳಲ್ಲಿ ಅಸ್ಸಾಂ, ಮಣಿಪುರ ಮತ್ತು ಜಾರ್ಖಂಡ್ ಸೇರಿವೆ.
1967ರಲ್ಲಿ ಜಾರಿಗೊಂಡ ಯುಎಪಿಎ ವ್ಯಕ್ತಿಯನ್ನು ಅಥವಾ ಸಂಘಟನೆಯನ್ನು ‘ಕಾನೂನುಬಾಹಿರ’ ಎಂದು ಹೆಸರಿಸಲು ಕೇಂದ್ರ ಸರಕಾರಕ್ಕೆ ಅವಕಾಶ ನೀಡುತ್ತದೆ ಮತ್ತು ಭಯೋತ್ಪಾದಕ ಕೃತ್ಯಗಳಿಗೆ ಶಿಕ್ಷೆಗಳನ್ನೂ ವ್ಯಾಖ್ಯಾನಿಸುತ್ತದೆ. ಇತರ ಸಾಮಾನ್ಯ ಕ್ರಿಮಿನಲ್ ಕಾನೂನುಗಳಡಿಯ 60ರಿಂದ 90 ದಿನಗಳಿಗೆ ಹೋಲಿಸಿದರೆ ಯುಎಪಿಎ ಅಡಿ ತನಿಖಾ ಸಂಸ್ಥೆಗಳು ಪ್ರಕರಣದ ತನಿಖೆಯನ್ನು ನಡೆಸಲು 180 ದಿನಗಳ ಕಾಲಾವಕಾಶವನ್ನು ಹೊಂದಿರುತ್ತವೆ.
ಯುಎಪಿಎ ಅಡಿ ಆರೋಪಿಗೆ ಜಾಮೀನು ಪಡೆಯುವುದು ಸಹ ಸಾಮಾನ್ಯವಾಗಿ ಕಷ್ಟಕರವಾಗಿರುತ್ತದೆ.
ವರ್ಷಗಳಿಂದಲೂ ಸಾಮಾಜಿಕ ಹೋರಾಟಗಾರರು ಮತ್ತು ಕಾನೂನು ತಜ್ಞರು ಸರಕಾರದ ಟೀಕಾಕಾರರ ವಿರುದ್ಧ ಯುಎಪಿಎ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳದ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಭಯೋತ್ಪಾದನೆಯನ್ನು ಎದುರಿಸಲು ಈ ಕಾನೂನನ್ನು ತರಲಾಗಿದೆಯಾದರೂ ಅದನ್ನು ಇತರ ಹಲವಾರು ಚಟುವಟಿಕೆಗಳ ವಿರುದ್ಧ ಬಳಸಲಾಗಿದೆ ಎಂದು ಅವರು ಬೆಟ್ಟು ಮಾಡಿದ್ದಾರೆ.