ಜಮ್ಮು ಕಾಶ್ಮೀರ | ಪೂಂಚ್‌ನಲ್ಲಿ ಒಳನುಸುಳುವಿಕೆಗೆ ಯತ್ನಿಸಿದ ಇಬ್ಬರು ಭಯೋತ್ಪಾದಕರ ಹತ್ಯೆ
ಸಾಂದರ್ಭಿಕ ಚಿತ್ರ (credit: PTI)
ಶ್ರೀನಗರ : ಜಮ್ಮುಕಾಶ್ಮೀರದ ಪೂಂಚ್‌ನ ಗಡಿ ನಿಯಂತ್ರಣಾ ರೇಖೆ ಬಳಿ ಒಳನುಸುಳುವಿಕೆಗೆ ಪ್ರಯತ್ನಿಸಿದ ಇಬ್ಬರು ಪಾಕ್ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಒಳನುಸುಳಲು ಪ್ರಯತ್ನಿಸುತ್ತಿದ್ದ ಭಯೋತ್ಪಾದಕರನ್ನು ಭಾರತೀಯ ಪಡೆಗಳು ತಡೆದು ಗುಂಡಿಕ್ಕಿ ಹತ್ಯೆ ಮಾಡಿದೆ ಎಂದು ಮೂಲಗಳು ತಿಳಿಸಿರುವ ಬಗ್ಗೆ India Today ವರದಿ ಮಾಡಿದೆ.
ಎಲ್ಒಸಿ ಬಳಿ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನ ಕಂಡು ಬಂದ ನಂತರ ಪೂಂಚ್‌ನ ದೇಘ್ವಾರ್ ಸೆಕ್ಟರ್‌ನಲ್ಲಿ ಬೃಹತ್ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಎಪ್ರಿಲ್ 22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಮತ್ತು ಅವನ ಇಬ್ಬರು ಸಹಚರರು ಸೇರಿದಂತೆ ಮೂವರು ಭಯೋತ್ಪಾದಕರನ್ನು ಶ್ರೀನಗರದ ಹೊರವಲಯದಲ್ಲಿ ನಡೆದ ಪ್ರತ್ಯೇಕ ಎನ್ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಹತ್ಯೆ ಮಾಡಿದ ಒಂದು ದಿನದ ನಂತರ ಮತ್ತಿಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಸೋಮವಾರದ ಕಾರ್ಯಾಚರಣೆಯಲ್ಲಿ ಸುಲೇಮಾನ್ ಅಲಿಯಾಸ್ ಆಸಿಫ್ ಹತ್ಯೆಯಾಗಿದ್ದ. ಈತ ಪಹಲ್ಗಾಮ್ ದಾಳಿಯ ಮುಖ್ಯ ಸಂಚುಕೋರ ಎಂದು ಹೇಳಲಾಗಿತ್ತು.