×
Ad

2020ರ ದಿಲ್ಲಿ ಗಲಭೆ | ದ್ವೇಷ ಭಾಷಣ, ಕೋಮು ಗಲಭೆಯ ಕುರಿತು ಪ್ರತ್ಯೇಕ ಎಫ್‌ಐಆರ್ ದಾಖಲಿಸಲು ನ್ಯಾಯಾಲಯದ ನಿರ್ದೇಶನ

Update: 2025-07-26 13:45 IST

File Photo: PTI

ಹೊಸದಿಲ್ಲಿ: 2020ರ ಫೆಬ್ರವರಿಯಲ್ಲಿ ದಿಲ್ಲಿಯಲ್ಲಿ ನಡೆದ ಕೋಮು ಗಲಭೆಯ ಸಂದರ್ಭದಲ್ಲಿನ ದ್ವೇಷ ಭಾಷಣ, ಪ್ರಚೋದನಕಾರಿ ಘೋಷಣೆಗಳು ಮತ್ತು ಹಿಂಸಾಚಾರದ ಕುರಿತು ಪ್ರತ್ಯೇಕ ಎಫ್‌ಐಆರ್ ದಾಖಲಿಸಲು ದಿಲ್ಲಿ ಪೊಲೀಸರಿಗೆ ನ್ಯಾಯಾಲಯ ಆದೇಶಿಸಿದೆ.

ಈ ಕುರಿತು ನೀಡಿರುವ ಆದೇಶದಲ್ಲಿ ನ್ಯಾಯಾಲಯವು, ಗಂಭೀರ ಆರೋಪಗಳನ್ನು ಸಾಮಾನ್ಯ ಎಫ್‌ಐಆರ್‌ಗೆ ಒಳಪಡಿಸಿ ನಿರ್ಲಕ್ಷಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ.

ಪ್ರಥಮ ದರ್ಜೆಯ ಮ್ಯಾಜಿಸ್ಟ್ರೇಟ್ ಇಸ್ರಾ ಝೈದಿ ಅವರು ಈ ಆದೇಶ ನೀಡಿದ್ದು, ದೂರುದಾರ ರಹೀಸ್ ಅಹ್ಮದ್ ಸಲ್ಲಿಸಿದ ದೂರಿನಲ್ಲಿ ಸಂಜ್ಞೇಯ ಅಪರಾಧಗಳು ಸ್ಪಷ್ಟವಾಗಿ ಹೊರಹೊಮ್ಮಿದೆ ಮತ್ತು ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂಬುದನ್ನು ಗಣನೆಗೆ ತೆಗೆದುಕೊಂಡಿತು.

ರಹೀಸ್ ಅಹ್ಮದ್ ಅವರು ತಮ್ಮ ಹಾಗೂ ಕುಟುಂಬದ ಸದಸ್ಯರು ಗಲಭೆಯ ವೇಳೆ ಗುರಿಯಾಗಿದ್ದು, ಹಿಂಸಾತ್ಮಕ ದಾಳಿಗೆ ಒಳಗಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅವರು ನೀಡಿರುವ ದೂರದಲ್ಲಿ ಕೆಲ ಬಲಪಂಥೀಯ ವ್ಯಕ್ತಿಗಳು ದ್ವೇಷ ಭಾಷಣ ಮಾಡಿದ್ದಾರೆ. ಶಸ್ತ್ರಾಸ್ತ್ರಗಳನ್ನು ಹಿಡಿದಿದ್ದ ಗುಂಪು ಕೋಮು ಪ್ರಚೋದನೆ ನೀಡುವ ಘೋಷಣೆಗಳನ್ನು ಕೂಗಿದೆ. ಸಾರ್ವಜನಿಕ ಸೊತ್ತಿಗೆ ಬೆಂಕಿ ಹಚ್ಚಲಾಗಿದೆ ಎಂಬ ಆರೋಪಗಳನ್ನು ಮಾಡಿದ್ದಾರೆ.

"ದೂರುದಾರನು ಮಾಡಿರುವ ಗಂಭೀರ ಆರೋಪಗಳು ಯಾವುದೇ ಸಾಮಾನ್ಯ ಎಫ್‌ಐಆರ್‌ನಲ್ಲಿ ಸೇರಿಸಿ ನಿರ್ಲಕ್ಷಿಸಲಾಗಬಾರದು. ಪ್ರತಿಯೊಬ್ಬನ ದೂರು ಪ್ರತ್ಯೇಕವಾಗಿ ಪರಿಶೀಲನೆಯಾಗಬೇಕು," ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಅಹ್ಮದ್ ಅವರ ದೂರಿನ ಆಧಾರದ ಮೇಲೆ ಸಂಬಂಧಪಟ್ಟ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್, ಪ್ರತ್ಯೇಕ ಎಫ್‌ಐಆರ್ ದಾಖಲಿಸಬೇಕು ಮತ್ತು ನ್ಯಾಯಯುತ ತನಿಖೆ ಮುಂದುವರೆಸಬೇಕು ಎಂದು ನ್ಯಾಯಾಲಯ ಸೂಚನೆ ನೀಡಿದೆ. ಆರೋಪಿಗಳನ್ನು ತಕ್ಷಣ ಬಂಧಿಸಲು ಯಾವುದೇ ನಿರ್ದೇಶನ ನೀಡಿಲ್ಲ.

ಅಹ್ಮದ್ ಅವರು ತಮ್ಮ ದೂರಿನ ಪ್ರತ್ಯೇಕ ಎಫ್‌ಐಆರ್ ದಾಖಲಿಸಲು ಸಲ್ಲಿಸಿದ್ದ ಅರ್ಜಿ ತಾಂತ್ರಿಕ ಕಾರಣಗಳಿಂದ ವಜಾಗೊಂಡರೂ, ನ್ಯಾಯಾಲಯ ನೀಡಿರುವ ಹೊಸ ಆದೇಶದಿಂದ ಪ್ರಕರಣದ ತನಿಖೆ ಮತ್ತಷ್ಟು ಚುರುಕು ಪಡೆಯುವ ನಿರೀಕ್ಷೆಯಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News