ಬಿರಿಯಾನಿ ಆರ್ಡರ್ ಮಾಡುವ ವಿಚಾರಕ್ಕೆ ಜಗಳ; ಯುವಕನ ಹತ್ಯೆ
ಸಾಂದರ್ಭಿಕ ಚಿತ್ರ
ಚೆನ್ನೈ: ಬಿರಿಯಾನಿ ವಿಷಯಕ್ಕೆ ಮೂವರ ನಡುವೆ ನಡೆದಿರುವ ಘರ್ಷಣೆಯಲ್ಲಿ 22 ವರ್ಷದ ಯುವಕನೊಬ್ಬ ಹತ್ಯೆಗೀಡಾಗಿರುವ ಘಟನೆ ಶನಿವಾರ ನಡೆದಿದೆ. ಮೃತ ಯುವಕನನ್ನು ಬಾಲಾಜಿ ಎಂದು ಗುರುತಿಸಲಾಗಿದ್ದು, ಆತ ಚೆನ್ನೈನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದ. ಆತ ಶನಿವಾರದಂದು ತನ್ನ ಗೆಳೆಯರೊಂದಿಗೆ ಊಟ ಮಾಡಲು ಮುನ್ನೂರ್ ಪೇಟ್ ಬಸ್ ನಿಲ್ದಾಣದ ಬಳಿ ತೆರಳಿದ್ದ ಎಂದು indiatoday.in ವರದಿ ಮಾಡಿದೆ.
ಅವರು ಅಂಗಡಿಯಿಂದ ಬಿರಿಯಾನಿ ಖರೀದಿಸುವಾಗ, ಅಲ್ಲಿಗೆ ಬಂದಿರುವ ಮೂವರು ಪಾನಮತ್ತ ವ್ಯಕ್ತಿಗಳೂ ಕೂಡಾ ಅದೇ ಅಂಗಡಿಯಲ್ಲಿ ಬಿರಿಯಾನಿಗೆ ಆರ್ಡರ್ ಮಾಡಿದ್ದಾರೆ. ಆದರೆ, ಅಂಗಡಿಯ ಮಾಲಕರು ಬಿರಿಯಾನಿಯನ್ನು ಮೊದಲು ಬಾಲಾಜಿ ಮತ್ತು ಆತನ ಗೆಳೆಯರಿಗೆ ಪೂರೈಸಿದ್ದರಿಂದ, ಆ ಪಾನಮತ್ತ ವ್ಯಕ್ತಿಗಳು ಅವರೊಂದಿಗೆ ಘರ್ಷಣೆಗಿಳಿದಿದ್ದಾರೆ.
ಈ ಪೈಕಿ ಓರ್ವ ಪಾನಮತ್ತ ವ್ಯಕ್ತಿ ಬಾಲಾಜಿಯ ಮೇಲೆ ಕುಡುಗೋಲಿನಿಂದ ದಾಳಿ ನಡೆಸಿದ್ದಾನೆ. ಈ ಸಂಪೂರ್ಣ ಘಟನೆಯು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕೂಡಲೇ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಬಾಲಾಜಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಆತ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆಯ ವೈದ್ಯರು ಘೋಷಿಸಿದ್ದಾರೆ.
ಈ ನಡುವೆ, ಚೆನ್ನೈ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣದ ಕುರಿತು ತನಿಖೆ ಪ್ರಗತಿಯಲ್ಲಿದೆ.