ಪಡಿತರ ಹಗರಣ: ಮೂವರು ಐಟಿಬಿಪಿ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆ
file photo (pti)
ಡೆಹ್ರಾಡೂನ್: ಜವಾನರಿಗೆ ಪಡಿತರ ಖರೀದಿಯಲ್ಲಿ ಸುಮಾರು 70.6 ಲಕ್ಷ ರೂಪಾಯಿ ಅವ್ಯವಹಾರ ಎಸಗಿದ ಆರೋಪದಲ್ಲಿ ಇಂಡೊ-ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಪಡೆಯ 23ನೇ ಬೆಟ್ಯಾಲಿಯನ್ನ ಮಾಜಿ ಕಮಾಂಡಂಟ್, ಮೂವರು ಅಧಿಕಾರಿಗಳು ಸೇರಿದಂತೆ ಏಳು ಮಂದಿಯ ವಿರುದ್ಧ ಸಿಬಿಐ ಕ್ರಮ ಆರಂಭಿಸಿದೆ.
ಐಟಿಬಿಪಿ ಕಮಾಂಡಂಟ್ ಪಿಯೂಶ್ ಪುಷ್ಕರ್ ನೀಡಿದ ದೂರಿನ ಮೇರೆಗೆ ಡಿಸೆಂಬರ್ 13ರಂದು ಏಳು ಮಂದಿಯ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ಈ ಸಂಬಂಧ ಈಗಾಗಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.
ಆರೋಪಿಗಳಲ್ಲಿ ಮಾಜಿ ಕಮಾಂಡೆಂಟ್ ಅಶೋಕ್ ಕುಮಾರ್ ಗುಪ್ತಾ, ಸಬ್ ಇನ್ಸ್ಪೆಕ್ಟರ್ಗಳಾದ ಸುಧೀರ್ ಕುಮಾರ್ ಮತ್ತು ಅನಸೂಯಾ ಪ್ರಸಾದ್ ಸೇರಿದಂತೆ ಮೂವರು ಐಟಿಬಿಪಿ ಅಧಿಕಾರಿಗಳು ಸೇರಿದ್ದಾರೆ. ಇವರ ಜತೆಗೆ ನಾಲ್ವರು ಖಾಸಗಿ ಗುತ್ತಿಗೆದಾರರು ಹಾಗೂ ವ್ಯಾಪಾರಿಗಳನ್ನು ಕೂಡಾ ತನಿಖೆಗೆ ಗುರಿಪಡಿಸಲಾಗಿದೆ.
ಅಧಿಕಾರಿಗಳು ಗುತ್ತಿಗೆದಾರರ ಜತೆ ಶಾಮೀಲಾಗಿ, ವೈಯಕ್ತಿಕ ಲಾಭಕ್ಕಾಗಿ ಹೆಚ್ಚುವರಿ ಬಿಲ್ ಸಲ್ಲಿಸಿ ಹಣಕಾಸು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆಪಾದಿಸಲಾಗಿದೆ. ಇದರಿಂದ 2017 ರಿಂದ 2019ರ ಅವಧಿಯಲ್ಲಿ 70.6 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ದೂರು ನೀಡಲಾಗಿದೆ. ಇಂಥದ್ದೇ ಪ್ರಕರಣದಲ್ಲಿ ಇತರ ಮೂವರು ಐಟಿಬಿಪಿ ಅಧಿಕಾರಿಗಳು ಕಳೆದ ವರ್ಷದಿಂದ ವಿಚಾರಣೆ ಎದುರಿಸುತ್ತಿದ್ದಾರೆ ಎನ್ನುವುದು ಗಮನಾರ್ಹ.