ಸಾಬೂನು ಕಾರ್ಖಾನೆಯಲ್ಲಿ ಭಾರಿ ಸ್ಫೋಟ; 4 ಮಂದಿ ಮೃತ್ಯು, 5 ಮಂದಿಗೆ ಗಾಯ
Photo: ANI
ಮೀರತ್: ಸಾಬೂನು ಕಾರ್ಖಾನೆಯೊಂದರಲ್ಲಿ ಒಂದರ ಹಿಂದೆ ಒಂದು ಸ್ಫೋಟ ಸಂಭವಿಸಿರುವುದರಿಂದ ನಾಲ್ವರು ಮೃತಪಟ್ಟು, ಐದು ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ ಎಂದು freepressjournal.in ವರದಿ ಮಾಡಿದೆ.
ವರದಿಗಳ ಪ್ರಕಾರ, ಮಂಗಳವಾರ ಬೆಳಗ್ಗೆ ಕಾರ್ಖಾನೆಯಲ್ಲಿ ಭಾರಿ ಸ್ಫೋಟ ಸಂಭವಿಸಿದ್ದರಿಂದ ಕಾರ್ಖಾನೆಯ ಕಟ್ಟಡವು ನೆಲಸಮಗೊಂಡು, ಅದರ ಅವಶೇಷಗಳಡಿ ಕಾರ್ಖಾನೆಯ ಒಳಗಿದ್ದ ಕಾರ್ಮಿಕರು ಹೂತು ಹೋಗಿದ್ದಾರೆ. ಕಾರ್ಖಾನೆಯ ಅವಶೇಷಗಳನ್ನು ತೆರವುಗೊಳಿಸುವಾಗ ಮತ್ತೆ ಎರಡನೆಯ ಸ್ಫೋಟ ಸಂಭವಿಸಿದೆ. ಈ ಸಂದರ್ಭದಲ್ಲಿ ಘಟನಾ ಸ್ಥಳದಲ್ಲಿದ್ದ ಅನೇಕ ಜನರಿಗೆ ಇಟ್ಟಿಗೆಯ ಚೂರುಗಳು ತಗುಲಿ ಗಾಯಗಳಾಗಿವೆ.
ನಾಲ್ಕು ಮೃತದೇಹಗಳನ್ನು ಅವಶೇಷಗಳಡಿಯಿಂದ ಹೊರ ತೆಗೆಯಲಾಗಿದ್ದು, ಐದು ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ವಿಶೇಷ ಪೊಲೀಸ್ ವರಿಷ್ಠಾಧಿಕಾರಿಯವರನ್ನೊಳಗೊಂಡ ಪೊಲೀಸ್ ಪಡೆ ಹಾಗೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡವೊಂದನ್ನೂ ಕರೆಸಿಕೊಳ್ಳಲಾಗಿದೆ. ಕಾರ್ಖಾನೆಯ ಬಾಯ್ಲರ್ ನಲ್ಲಿದ್ದ ರಾಸಾಯನಿಕಗಳು ಸ್ಫೋಟಗೊಂಡು ಈ ದುರ್ಘಟನೆ ಸಂಭವಿಸಿರುವಂತೆ ಕಾಣುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಆದಿತ್ಯನಾಥ್, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಯನ್ನು ಖಾತ್ರಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.