ಚಂಡೀಗಢ-ಕುಲ್ಲು ಹೆದ್ದಾರಿಯಲ್ಲಿ 50 ಕಿ.ಮೀ ವ್ಯಾಪ್ತಿಯಲ್ಲಿ ಟ್ರಾಫಿಕ್ ಜಾಮ್: ದಾರಿ ಮಧ್ಯೆ ಟ್ರಕ್‌ಗಳಲ್ಲಿ ಕೊಳೆಯುತ್ತಿರುವ ಕೋಟ್ಯಾಂತರ ರೂ. ಮೌಲ್ಯದ ಹಣ್ಣು, ತರಕಾರಿಗಳು
Photo credit: ANI
ಚಂಡೀಗಢ : ಭಾರೀ ಮಳೆ ಮತ್ತು ಭೂಕುಸಿತಗಳಿಂದಾಗಿ ಚಂಡೀಗಢ-ಕುಲ್ಲು ಹೆದ್ದಾರಿಯಲ್ಲಿ 50 ಕಿ.ಮೀ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ದಿಲ್ಲಿಗೆ ಹಣ್ಣುಗಳು ಮತ್ತು ತರಕಾರಿಗಳನ್ನು ಸಾಗಿಸುತ್ತಿದ್ದ ನೂರಾರು ಟ್ರಕ್‌ಗಳು ಸೇರಿದಂತೆ ಸಾವಿರಾರು ವಾಹನಗಳು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿವೆ.
ಚಂಡೀಗಢ-ಮನಾಲಿ ಹೆದ್ದಾರಿಯಲ್ಲಿ ಹಲವಾರು ಸ್ಥಳಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ. ಪ್ರಯಾಣಿಕರು ಸಂಚಾರ ದಟ್ಟಣೆಯಿಂದ ಗಂಟೆಗಟ್ಟಲೆ ಪರದಾಟ ನಡೆಸಿದ್ದಾರೆ. ಅಗತ್ಯ ವಸ್ತುಗಳ ಸಾಗಾಟಕ್ಕೆ ತೊಂದರೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋಟ್ಯಂತರ ರೂ ಮೌಲ್ಯದ ಸೇಬು, ಟೊಮೆಟೊ ಮತ್ತು ಇತರ ತರಕಾರಿಗಳು ಕೊಳೆಯುತ್ತಿವೆ ಎಂದು ಸಂಚಾರದಟ್ಟಣೆಯಲ್ಲಿ ಸಿಲುಕಿಕೊಂಡಿರುವ ಟ್ರಕ್ ಚಾಲಕರು ಆಘಾತವನ್ನು ವ್ಯಕ್ತಪಡಿಸಿದ್ದಾರೆ. ಪ್ರತಿ ಟ್ರಕ್ ಲೋಡ್ ಸುಮಾರು 4 ರಿಂದ 4.5 ಲಕ್ಷ ರೂ. ಮೌಲ್ಯದ್ದಾಗಿದೆ ಎಂದು ತಿಳಿಸಿದ್ದಾರೆ.
"ಸೇಬುಗಳನ್ನು ಸಾಹಿಬಾಬಾದ್ ಹಣ್ಣಿನ ಮಾರುಕಟ್ಟೆಗೆ ಕೊಂಡೊಯ್ಯಬೇಕಿತ್ತು. ಆದರೆ ಐದು ದಿನಗಳಿಂದ ಕುಲ್ಲುವಿನಲ್ಲಿ ಸಿಲುಕಿಕೊಂಡಿದೆ. ಆಝಾದದಪುರ ಮತ್ತು ಸಾಹಿಬಾಬಾದ್ ಮಂಡಿಗಳಿಗೆ ತೆರಳುತ್ತಿದ್ದ ಸಾವಿರಾರು ಟ್ರಕ್‌ಗಳು ದಾರಿ ಮಧ್ಯೆ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಿದೆ" ಎಂದು ಸಂಚಾರದಟ್ಟಣೆಯಲ್ಲಿ ಸಿಲುಕಿರುವ ಟ್ರಕ್ ಚಾಲಕ ಗಫ್ಫಾರ್ ಹೇಳಿದ್ದಾರೆ.
"ಹೆದ್ದಾರಿಯಲ್ಲಿ ಸಣ್ಣ ವಾಹನಗಳಿಗೆ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ. ಆದರೆ, ಟ್ರಕ್‌ಗಳು ಸಂಚಾರದಟ್ಟಣೆಯಲ್ಲಿ ಸಿಲುಕಿಕೊಂಡಿವೆ. ಮಂಡಿ ಮತ್ತು ಕುಲ್ಲು ನಡುವೆ ಹಲವೆಡೆ ಭೂಕುಸಿತ ಸಂಭವಿಸಿದೆ. ತೆರವು ಕಾರ್ಯಾಚರಣೆ ನಡೆಯುತ್ತಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.