ಧಾರ್ಮಿಕ ಉಡುಪಿನಲ್ಲೇ ಹರ್ಡಲ್ಸ್ ಜಿಗಿದು ಚಿನ್ನ ಗೆದ್ದ ಕೇರಳದ ಕ್ರೈಸ್ತ ಸನ್ಯಾಸಿನಿ
ವಯನಾಡಿನ 55 ವರ್ಷದ ಸಿಸ್ಟರ್ ಸಬೀನಾ ಅವರ ಅಪರೂಪದ ಸಾಧನೆಗೆ ಪ್ರಶಂಸೆ
ಸಿಸ್ಟರ್ ಸಬೀನಾ (Photo credit: indiatoday.in)
ವಯನಾಡ್: ಕೇರಳದ ವಯನಾಡಿನ 55 ವರ್ಷದ ಕ್ರೈಸ್ತ ಸನ್ಯಾಸಿನಿಯೊಬ್ಬರು ತಮ್ಮ ಧಾರ್ಮಿಕ ಉಡುಪಿನಲ್ಲೇ ಹರ್ಡಲ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದು ರಾಜ್ಯದಾದ್ಯಂತ ಗಮನ ಸೆಳೆದಿದ್ದಾರೆ.
ಮಾನಂತವಾಡಿಯ ದ್ವಾರಕಾ ಎ.ಯು.ಪಿ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿಯಾಗಿರುವ ಸಿಸ್ಟರ್ ಸಬೀನಾ, ರಾಜ್ಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಮೀಟ್‌ನಲ್ಲಿ ತಮ್ಮ ಉತ್ಸಾಹ ಮತ್ತು ಕ್ರೀಡಾ ಸ್ಪೂರ್ತಿಗೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.
1990ರ ದಶಕದಲ್ಲಿ ಕಾಸರಗೋಡಿನಿಂದ ವಯನಾಡಿಗೆ ಸ್ಥಳಾಂತರಗೊಂಡ ಸಿಸ್ಟರ್ ಸಬೀನಾ, ಮುಂದಿನ ಮಾರ್ಚ್‌ನಲ್ಲಿ ನಿವೃತ್ತಿಯಾಗಲಿದ್ದಾರೆ. ಈ ಸ್ಪರ್ಧೆ ತಮ್ಮ ಶಿಕ್ಷಕ ವೃತ್ತಿಯ ಕೊನೆಯದಾಗಿರಬಹುದೆಂದು ಅವರು ತಿಳಿಸಿದ್ದಾರೆ. ಸ್ಪರ್ಧೆಯ ವೇಳೆ ಅಡೆತಡೆಗಳನ್ನು ಸಲೀಸಾಗಿ ದಾಟುತ್ತಿರುವ ಅವರ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಪ್ರೇಕ್ಷಕರು ಹಾಗೂ ವಿದ್ಯಾರ್ಥಿಗಳು ಅವರಿಗೆ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕೇರಳದ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಅವರು ಸಿಸ್ಟರ್ ಸಬೀನಾ ಅವರ ಸಾಧನೆಯನ್ನು ಶ್ಲಾಘಿಸಿ, “ಈ ಗೆಲುವು ಇಚ್ಛಾಶಕ್ತಿಯ ಮತ್ತು ದೃಢಸಂಕಲ್ಪದ ಸಂಕೇತವಾಗಿದೆ. ವಯಸ್ಸು ಅಥವಾ ಸಂದರ್ಭಗಳು ಯಾವುದೇ ಗುರಿಗೆ ಅಡ್ಡಿಯಾಗುವುದಿಲ್ಲ ಎಂಬುದನ್ನು ಸಹೋದರಿ ತಮ್ಮ ಜೀವನದ ಮೂಲಕ ಸಾಬೀತುಪಡಿಸಿದ್ದಾರೆ. ಅವರ ಸಮರ್ಪಣೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಸ್ಫೂರ್ತಿಯಾಗಿದೆ,” ಎಂದು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.