×
Ad

ಶೇ.70ರಷ್ಟು ಭಾರತೀಯರಿಗೆ ಆರೋಗ್ಯ ವಿಮೆಯ ರಕ್ಷಣೆಯಿಲ್ಲ: ಲ್ಯಾನ್ಸೆಟ್ ವರದಿ

Update: 2025-08-19 20:25 IST

 ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಆರೋಗ್ಯ ವಿಮಾ ರಕ್ಷಣಾ ಯೋಜನೆಗಳ ವಿಸ್ತರಣೆಯಲ್ಲಿ ಭಾರತವು ಗಣನೀಯ ಪ್ರಗತಿ ಸಾಧಿಸಿದ್ದು, ಆಗ್ನೇಯ ಏಶ್ಯದ ಆರು ರಾಷ್ಟ್ರಗಳ ಪೈಕಿ ದ್ವಿತೀಯ ಸ್ಥಾನದಲ್ಲಿದೆ ಎಂದು ಎಂದು ಲ್ಯಾನ್ಸೆಟ್ ಇತ್ತೀಚೆಗೆ ಪ್ರಕಟಿಸಿದ ಅಧ್ಯಯನ ವರದಿಯೊಂದು ತಿಳಿಸಿದೆ.

ಆದಾಗ್ಯೂ ಶೇ.70ರಷ್ಟು ಭಾರತೀಯರು ಆರೋಗ್ಯ ವಿಮಾ ರಕ್ಷಣೆಯಿಂದ ಹೊರಗಿದ್ದಾರೆಂದು ಈ ವರದಿ ಬೆಟ್ಟು ಮಾಡಿ ತೋರಿಸಿದೆ.

ಇಂಡೊನೇಶ್ಯವು ಆರೋಗ್ಯ ವಿಮಾ ಸುರಕ್ಷೆಯನ್ನು ಅತ್ಯಧಿಕ ಸಂಖ್ಯೆಯ ಜನರಿಗೆ ವಿಸ್ತರಿಸಿದ ದಕ್ಷಿಣ ಏಶ್ಯದ ರಾಷ್ಟ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಭಾರತದಲ್ಲಿ 15ರಿಂದ 49 ವರ್ಷದೊಳಗಿನ 29.8 ಶೇ.ಮಹಿಳೆಯರು ಹಾಗೂ 33.3 ಶೇಕಡ ಪುರುಷರು ಒಂದಲ್ಲ ಒಂದು ರೀತಿಯ ಆರೋಗ್ಯ ವಿಮೆಗೆ ಒಳಪಟ್ಟಿದ್ದಾರೆಂದು ‘ದಿ ಲ್ಯಾನ್ಸೆಟ್ ರೀಜನಲ್ ಹೆಲ್ತ್-ಸೌತ್‌ಈಸ್ಟ್ ಏಶ್ಯಾ’ ನಿಯತಕಾಲಿಕದಲ್ಲಿ ಪ್ರಕಟವಾದ ಈ ಅಧ್ಯಯನ ವರದಿಯು ಹೇಳಿದೆ.

ಇದೊಂದು ಮಹತ್ವದ ಸಾಧನೆಯಾಗಿದ್ದರೂ, ದೇಶದ ಜನಸಂಖ್ಯೆಯ ಒಂದು ದೊಡ್ಡ ವರ್ಗವು ಆರೋಗ್ಯ ವಿಮೆಗೆ ಒಳಪಟ್ಟಿಲ್ಲವೆಂಬ ವಾಸ್ತವದ ಬಗ್ಗೆಯೂ ಈ ವರದಿಯು ಗಮನಸೆಳೆದಿದೆ.

ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ (ಆರ್‌ಎಸ್‌ಬಿವೈ) ಹಾಗೂ ಆಯುಷ್ಮಾನ್ ಭಾರತ್-ಪ್ರಧಾನಮಂತ್ರಿ ಜನ ಆರೋಗ್ಯ ಯೋಜನಾ (ಎಬಿ-ಪಿಎಂಜೆಎವೈ)ದಂತಹ ಆರೋಗ್ಯ ಸಂಬಂಧಿತ ಉಪಕ್ರಮಗಳು, ದೇಶದ ಆರ್ಥಿಕವಾಗಿ ದುರ್ಬಲ ಜನಸಮುದಾಯಗಳ ವಿತ್ತೀಯ ರಕ್ಷಣೆಯನ್ನು ಸುಧಾರಣೆಗೊಳಿಸುವಲ್ಲಿ ಪರಿಣಾಮಕಾರಿ ಪಾತ್ರ ವಹಿಸಿವೆಯೆಂದು ವರದಿ ಹೇಳಿದೆ.

ಆದರೆ ಈ ಎಲ್ಲಾ ಸರಕಾರಿ ಉಪಕ್ರಮಗಳ ಹೊರತಾಗಿಯೂ, ಜನಸಾಮಾನ್ಯರ ಆರೋಗ್ಯಪಾಲನೆಗೆ ಆರ್ಥಿಕ ಸಮಸ್ಯೆಯು ದೇಶದಲ್ಲಿ ಮುಂದುವರಿದಿದೆಯೆಂದು ವರದಿ ತಿಳಿಸಿದೆ.

ಆದಾಗ್ಯೂ ಜನರು ಯಾವುದೇ ವಿಮೆ ಅಥವಾ ಇತರ ಆರ್ಥಿಕ ನೆರವು ಇಲ್ಲದೆ ಆರೋಗ್ಯಕ್ಕಾಗಿ ಮಾಡುವ ವೆಚ್ಚವು ಭಾರತದ ಹಾಲಿ ಆರೋಗ್ಯ ವೆಚ್ಚದ ಶೇ.45ರಷ್ಟಾಗಿದೆ.

ಆದರೆ ಭಾರತದ ಒಟ್ಟು ಆಂತರಿಕ ಉತ್ಪನ್ನದಲ್ಲಿ ಆರೋಗ್ಯ ವೆಚ್ಚದ ಪಾಲು ಅತ್ಯಂತ ಕಡಿಮೆಯಿದ್ದು 3.3 ಶೇ.ಆಗಿದೆ. ತಲಾ ಆರೋಗ್ಯ ವೆಚ್ಚವು ಕೇವಲ 74 ಅಮೆರಿಕನ್ ಡಾಲರ್ (6,442 ರೂ.)ಆಗಿದೆ ಎಂದು ವರದಿ ಹೇಳಿದೆ.

ದಕ್ಷಿಣ ಏಶ್ಯದ ಆರು ರಾಷ್ಟ್ರಗಳಾದ ಬಾಂಗ್ಲಾದೇಶ, ಇಂಡೋನೇಶ್ಯ, ಮ್ಯಾನ್ಮಾರ್ ಹಾಗೂ ನೇಪಾಳಗಳಲ್ಲಿ ಜನತೆಯ ಆರೋಗ್ಯ ದತ್ತಾಂಶಗಳನ್ನು ವರದಿಯಲ್ಲಿ ವಿಶ್ಲೇಷಿಸಲಾಗಿದ್ದು, ಭಾರತಾದ್ಯಂತ ವಿಮಾ ಸುರಕ್ಷೆಯು ಸಾಮುದಾಯಿಕ ಮಟ್ಟದಲ್ಲಿ ಭಿನ್ನವಾಗಿರುವ ಬಗ್ಗೆಯೂ ಗಮನಸೆಳೆಯಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News