×
Ad

ಕಸದ ಬುಟ್ಟಿಯಲ್ಲಿದ್ದ 5 ಲಕ್ಷ ಮೌಲ್ಯದ ವಜ್ರದ ನೆಕ್ಲೆಸ್ | ವಾರಸುದಾರರಿಗೆ ಒಪ್ಪಿಸಿದ ಪೌರಕಾರ್ಮಿಕ!

Update: 2024-07-22 19:20 IST

PC :  X \ @chennaicorp

ಚೆನ್ನೈ : ಕಸದ ತೊಟ್ಟಿ ಸೇರಿದ್ದ 5 ಲಕ್ಷ ರೂ.ಮೌಲ್ಯದ ವಜ್ರದ ನೆಕ್ಲೆಸನ್ನು ಪೌರಕಾರ್ಮಿಕರೋಬ್ಬರು ಹುಡುಕಿ, ಅದರ ವಾರಸುದಾರರಿಗೆ ಒಪ್ಪಿಸಿ ಪ್ರಾಮಾಣಿಕತೆ ಮರೆದ ಘಟನೆ ತಮಿಳುನಾಡಿನ ಚೆನ್ನೈನ ವಿರುಗಂಬಾಕ್ಕಂನಲ್ಲಿ ವರದಿಯಾಗಿದೆ.

ಚೆನ್ನೈನ ವಿರುಗಂಬಾಕ್ಕಂನ ಬಿವಿ ರಾಜಮನ್ನಾರ್ನ ವಿಂಡ್ಸರ್ ಪಾರ್ಕ್ ಅಪಾರ್ಟ್‌ಮೆಂಟ್‌ ನ ದೇವರಾಜ್ ಎಂಬವರು ತಮ್ಮ ಸಂಬಂಧಿಯೊಬ್ಬರಿಗೆ ಉಡುಗೊರೆ ನೀಡಲು 5 ಲಕ್ಷ ರೂ. ಮೌಲ್ಯದ ವಜ್ರದ ನೆಕ್ಲೆಸ್ ಖರೀದಿಸಿ ಮನೆಯಲ್ಲಿಟ್ಟಿದ್ದರು. ಆದರೆ ಅದು ಏಕಾಏಕಿ ಕಣ್ಮರೆಯಾಗಿತ್ತು. ಇಡೀ ಮನೆಯನ್ನು ಹುಡುಕಿದರೂ ನೆಕ್ಲೇಸ್ ಪತ್ತೆಯಾಗದಿರುವುದು ಕುಟುಂಬಕ್ಕೆ ಆಘಾತ ತಂದಿತ್ತು.

ಗಾತ್ರದಲ್ಲಿ ತುಂಬಾ ಚಿಕ್ಕದಾಗಿದ್ದ ನೆಕ್ಲೆಸ್ ಕೆಳ ಬಿದ್ದು, ಗಮನಿಸದೇ ಕಸದ ಜೊತೆ ತೊಟ್ಟಿ ಸೇರಿರಬಹುದು ಎಂದು ಊಹಿಸಿ ಕಸದ ತೊಟ್ಟಿಯಲ್ಲಿ ಹುಡುಕಲು ನಿರ್ಧರಿಸಿದರು. ಚೆನ್ನೈ ಮಹಾನಗರ ಪಾಲಿಕೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿರುವ ಸಿಬ್ಬಂದಿಯನ್ನು ಸಂಪರ್ಕಿಸಿ ವಜ್ರದ ನೆಕ್ಲೆಸ್‌ ಕಳೆದುಕೊಂಡಿದ್ದ ವಿಚಾರವನ್ನು ಹೇಳಿದ್ದಾರೆ.

ದೇವರಾಜ್‌ ಅವರ ಮನವಿಗೆ ಸ್ಪಂದಿಸಿದ ಗ್ರೇಟರ್‌ ಚೆನ್ನೈ ಕಾರ್ಪೋರೇಷನ್‌ (ಜಿಸಿಸಿ) ಕಸ ಸಾಗಿಸುವ ಗುತ್ತಿಗೆದಾರ ಚಾಲಕ ಜೆ.ಆಂಥೋನಿಸಾಮಿ ಅವರು ಸ್ವಚ್ಛತಾ ಸಿಬ್ಬಂದಿಗೆ ಹುಡುಕುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವಚ್ಛತಾ ಕಾರ್ಮಿಕ ಹಾಗೂ ಕಸದ ಲಾರಿ ಚಾಲಕ ಅಂಥೋನಿ ಸಾಮಿ ಕಸದ ತೊಟ್ಟಿಯಲ್ಲಿ ವಜ್ರದ ನೆಕ್ಲೆಸ್‌ ಗಾಗಿ ಹುಡುಕಾಟ ನಡೆಸಿದ್ದಾರೆ.

ತೊಟ್ಟಿಯಲ್ಲಿದ್ದ ಹೂಮಾಲೆಗಳ ನಡುವೆ ವಜ್ರದ ನೆಕ್ಲೆಸ್ ಸಿಕ್ಕಿಹಾಕಿಕೊಂಡಿರುವುದು ಪೌರಕಾರ್ಮಿಕರಿಗೆ ಕಂಡಿದೆ. ಬಳಿಕ ಅದನ್ನು ಕಸದಿಂದ ಬಿಡಿಸಿ ದೇವರಾಜ್ ಅವರಿಗೆ ಹಸ್ತಾಂತರಿಸಿದ್ದಾರೆ. ಕಸದ ತೊಟ್ಟಿಯಲ್ಲಿದ್ದ ನೆಕ್ಲೆಸ್‌ ಹುಡುಕಿಕೊಟ್ಟ ಪೌರಕಾರ್ಮಿಕರಿಗೆ ದೇವರಾಜ್ ಕೃತಜ್ಞತೆ ಸಲ್ಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News