ಆಪ್ ಪಕ್ಷವು INDIA ಮೈತ್ರಿಕೂಟದಿಂದ ಹೊರಬಂದಿದೆ: ಸಂಜಯ್ ಸಿಂಗ್ ಅಚ್ಚರಿ ಹೇಳಿಕೆ
ಸಂಜಯ್ ಸಿಂಗ್ | PTI
ಹೊಸದಿಲ್ಲಿ: ಆಪ್ ಪಕ್ಷವು ಇಂಡಿಯಾ ಮೈತ್ರಿಕೂಟದಿಂದ ಹೊರ ಬಂದಿದ್ದು, ಮುಂಗಾರು ಅಧಿವೇಶನಕ್ಕೂ ಮೊದಲು ನಿಗದಿಯಾಗಿರುವ ವಿರೋಧ ಪಕ್ಷಗಳ ಮೈತ್ರಿಕೂಟದ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಆಪ್ ಹಿರಿಯ ನಾಯಕ ಸಂಜಯ್ ಸಿಂಗ್ ಹೇಳಿದ್ದಾರೆ.
ʼಆಪ್ ಪಕ್ಷವು ಇಂಡಿಯಾ ಮೈತ್ರಿಕೂಟದಿಂದ ಹೊರಗಿದೆ. ನಮ್ಮ ಪಕ್ಷ ಮತ್ತು ಅರವಿಂದ್ ಕೇಜ್ರಿವಾಲ್ ಅವರು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ನಾವು ಇನ್ನು ಮುಂದೆ ಮೈತ್ರಿಕೂಟದ ಭಾಗವಾಗಿಲ್ಲ. ಇಂಡಿಯಾ ಮೈತ್ರಿಕೂಟವನ್ನು ಲೋಕಸಭಾ ಚುನಾವಣೆಗಾಗಿ ಮಾತ್ರ ರಚಿಸಲಾಗಿದೆ. ಆಪ್ ಪಕ್ಷವು ನಂತರದ ಎಲ್ಲಾ ವಿಧಾನಸಭಾ ಚುನಾವಣೆಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದೆʼ ಎಂದು ಸಂಜಯ್ ಸಿಂಗ್ ಹೇಳಿದರು.
2024ರ ಲೋಕಸಭಾ ಚುನಾವಣೆಯಲ್ಲಿ ಆಪ್ ಮೈತ್ರಿಕೂಟದ ಭಾಗವಾಗಿ ಸ್ಪರ್ಧಿಸಿದೆ. ಆದರೆ ಆ ಬಳಿಕ ನಡೆದ ಹರ್ಯಾಣ ಮತ್ತು ದಿಲ್ಲಿ ವಿಧಾನಸಭಾ ಚುನಾವಣೆಗಳಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದೆ. ಇದಲ್ಲದೆ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಆಪ್ ಘೋಷಿಸಿದೆ.
ಲೋಕಸಭಾ ಚುನಾವಣೆಯ ನಂತರ ನಾವು ಎರಡು ವಿಧಾನಸಭಾ ಚುನಾವಣೆಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದೇವೆ. ಪಂಜಾಬ್ ಮತ್ತು ಗುಜರಾತ್ ಉಪಚುನಾವಣೆಗಳಲ್ಲಿಯೂ ಸ್ವತಂತ್ರವಾಗಿ ಸ್ಪರ್ಧಿಸಿದ್ದೇವೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.