×
Ad

ಪೊಲೀಸ್ ಅಧಿಕಾರಿಗಳ ಸಮಕ್ಷಮದಲ್ಲೇ ದಿಲ್ಲಿ ವಿವಿ ಪ್ರೊಫೆಸರ್ ಗೆ ಎಬಿವಿಪಿ ಸದಸ್ಯೆ, ವಿದ್ಯಾರ್ಥಿನಿಯಿಂದ ಕಪಾಳಮೋಕ್ಷ

Update: 2025-10-17 09:13 IST

ಹೊಸದಿಲ್ಲಿ: ದಿಲ್ಲಿ ವಿಶ್ವವಿದ್ಯಾನಿಲಯದ ಡಾ.ಭೀಮರಾವ್ ಅಂಬೇಡ್ಕರ್ ಕಾಲೇಜಿನ ಪ್ರೊಫೆಸರ್ ಒಬ್ಬರಿಗೆ ದಿಲ್ಲಿ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಘದ ಜಂಟಿ ಕಾರ್ಯರ್ಶಿ, ಎಬಿವಿಪಿ ಸದಸ್ಯೆ ದೀಪಿಕಾ ಝಾ ಕಪಾಳಮೋಕ್ಷ ಮಾಡಿದ್ದಲ್ಲದೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಇತರ ಕಾರ್ಯಕರ್ತರು ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಗುರುವಾರ ನಡೆದಿದೆ.

ವಿದ್ಯಾರ್ಥಿ ಸಂಘದ ಸದಸ್ಯರು ಮತ್ತು ಪ್ರೊಫೆಸರ್ ನಡುವೆ ಮಾತಿಕ ಚಕಮಕಿ ಮತ್ತು ಹಲ್ಲೆಯ ಘಟನೆಯನ್ನು ಬಿಂಬಿಸುವ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಶ್ವವಿದ್ಯಾನಿಲಯದ ಬೋಧಕ ಸಿಬ್ಬಂದಿ ಈ ಘಟನೆಯನ್ನು ವ್ಯಾಪಕವಾಗಿ ಖಂಡಿಸಿದ್ದಾರೆ.

"ಇತ್ತೀಚೆಗೆ ನಡೆದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎನ್‍ಎಸ್‍ಯುಐ ಅಭ್ಯರ್ಥಿಯೊಬ್ಬರು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದರು. ಇತರ ಎರಡು ಸ್ಥಾನಗಳಿಗೆ ಎಬಿವಿಪಿ ಸದಸ್ಯರು ಆಯ್ಕೆಯಾಗಿದ್ದರು. ವಿಜೇತರಾದ ಎನ್‍ಎಸ್‍ಯುಐ ಸದಸ್ಯರಿಗೆ ಎಬಿವಿಪಿ ಬೆಂಬಲಿಗರು ಹಲ್ಲೆ ಮಾಡಿದ್ದು, ಈ ಸಂಬಂಧ ದೂರು ನೀಡಲಾಗಿದೆ" ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ದಿಲ್ಲಿ ವಿವಿ ಪ್ರೊಫೆಸರ್ ಒಬ್ಬರು ವಿರಿಸಿದ್ದಾರೆ.

ಹಲ್ಲೆಗೊಳಗಾದ ಪ್ರೊಫೆಸರ್ ಅವರನ್ನು ಸುಜೀತ್ ಕುಮಾರ್ ಎಂದು ಗುರುತಿಸಲಾಗಿದ್ದು, ಕಾಲೇಜಿನ ಶಿಸ್ತುಸಮಿತಿ ಸಂಚಾಲಕರಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದರು. ಎಬಿವಿಪಿ ಸದಸ್ಯರು ಇತರ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿ ಆಗುತ್ತಿರುವ ಕ್ಯಾಂಪಸ್ ಹಿಂಸೆಯ ಘಟನೆಗಳ ಬಗ್ಗೆ ಸಮಿತಿ ತನಿಖೆ ನಡೆಸುತ್ತಿದೆ ಎಂದು ಡೆಮಾಕ್ರಟಿಕ್ ಟೀಚರ್ಸ್ ಫ್ರಂಟ್ (ಡಿಟಿಎಫ್) ಪ್ರಕಟಿಸಿದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದಿಲ್ಲಿ ವಿವಿ ಶಿಕ್ಷಕರ ಸಂಘ, ಕುಲಪತಿಗಳಿಗೆ ಪತ್ರ ಬರೆದಿದೆ.

ಪ್ರೊಫೆಸರ್ ತಮ್ಮ ಕರ್ತವ್ಯದಲ್ಲಿದ್ದಾಗ ಕಾಲೇಜಿನ ಒಳಗೆಯೇ ಕೆಲ ವಿದ್ಯಾರ್ಥಿಗಳು ಅವರ ಮೇಲೆ ಹಲ್ಲೆ ನಡೆಸಿದ ಘಟನೆ ಗಮನಕ್ಕೆ ಬಂದಿದೆ. ಶಿಕ್ಷಣ ಸಂಸ್ಥೆಗಳಲಿ ಅಂಥ ಹಿಂಸಾಕೃತ್ಯಗಳಿಗೆ ಅವಕಾಶವಿಲ್ಲ. ಇದು ಬೋಧಕ ಸಮುದಾಯದ ಘನತೆಗೆ ಧಕ್ಕೆ ತರುವ ಕೃತ್ಯವಾಗಿದ್ದು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಭೀತಿ ಮತ್ತು ಅಭದ್ರತೆಯನ್ನು ಸೃಷ್ಟಿಸುವ ಹುನ್ನಾರೆಂದು ಡಿಯುಟಿಎ ಹೇಳಿಕೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News