×
Ad

ದಿಲ್ಲಿ ವಿವಿ ಚುನಾವಣೆಯಲ್ಲಿ ಎಬಿವಿಪಿಗೆ ಗೆಲುವು | ಭಾರಿ ಅಂತರದಲ್ಲಿ ಅಧ್ಯಕ್ಷ ಸ್ಥಾನ ಗೆದ್ದ ಆರ್ಯನ್ ಮಾನ್

Update: 2025-09-19 16:29 IST

ಆರ್ಯನ್ ಮಾನ್ (Photo: X/@aryanmaanabvp)

ಹೊಸದಿಲ್ಲಿ: ದಿಲ್ಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಒಕ್ಕೂಟ (DUSU) ಚುನಾವಣೆ ಫಲಿತಾಂಶದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಭರ್ಜರಿ ಯಶಸ್ಸು ಸಾಧಿಸಿದೆ. ಆರೆಸ್ಸೆಸ್ ಬೆಂಬಲಿತ ಎಬಿವಿಪಿ ಅಭ್ಯರ್ಥಿ ಆರ್ಯನ್ ಮಾನ್, ಕಾಂಗ್ರೆಸ್ ಬೆಂಬಲಿತ ಎನ್‌ಎಸ್‌ಯುಐ (NSUI) ಅಭ್ಯರ್ಥಿ ಜೋಸ್ಲಿನ್ ನಂದಿತಾ ಚೌಧರಿ ಅವರನ್ನು 16,000 ಕ್ಕೂ ಹೆಚ್ಚಿನ ಮತಗಳ ಅಂತರದಿಂದ ಸೋಲಿಸಿ ಅಧ್ಯಕ್ಷ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಆರ್ಯನ್ ಮಾನ್ ಒಟ್ಟು 28,841 ಮತಗಳನ್ನು ಪಡೆದರೆ, ಜೋಸ್ಲಿನ್ 12,645 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು. ನಾಲ್ಕು ಹುದ್ದೆಗಳಲ್ಲಿ ಮೂರನ್ನು ಗೆಲ್ಲುವ ಮೂಲಕ ಎಬಿವಿಪಿ ಮೇಲುಗೈ ಸಾಧಿಸಿದೆ. ಉಪಾಧ್ಯಕ್ಷ ಸ್ಥಾನವನ್ನು ಎನ್‌ಎಸ್‌ಯುಐ ತನ್ನದಾಗಿಸಿಕೊಂಡಿದೆ.

ಅಧ್ಯಕ್ಷರಾಗಿ ABVPಯ ಆರ್ಯನ್ ಮಾನ್ ಅಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ NSUI ನ ರಾಹುಲ್ ಝಾನ್ಸಲಾ ಆಯ್ಕೆಯಾದರು. ಕಾರ್ಯದರ್ಶಿಯಾಗಿ ABVPಯ ಕುನಾಲ್ ಚೌಧರಿ, ಜಂಟಿ ಕಾರ್ಯದರ್ಶಿಯಾಗಿ ದೀಪಿಕಾ ಝಾ ಜಯಗಳಿಸಿದರು.

SFI ಮತ್ತು AISA ಯಾವುದೇ ಸ್ಥಾನವನ್ನು ಗಳಿಸಲು ವಿಫಲವಾದವು.

ಫಲಿತಾಂಶದ ನಂತರ ಎನ್‌ಎಸ್‌ಯುಐ ಪ್ರಕಟಣೆ ನೀಡಿದ್ದು, “ಸಾವಿರಾರು ದಿಲ್ಲಿ ವಿವಿ ವಿದ್ಯಾರ್ಥಿಗಳು ನಮ್ಮೊಂದಿಗೆ ದೃಢವಾಗಿ ನಿಂತಿದ್ದಾರೆ. ಗೆಲುವು ಅಥವಾ ಸೋಲು ನಮ್ಮ ಹೋರಾಟವನ್ನು ತಡೆಯದು. ನಾವು ವಿದ್ಯಾರ್ಥಿ ಹಕ್ಕುಗಳು ಮತ್ತು ವಿಶ್ವವಿದ್ಯಾಲಯದ ಹಿತಕ್ಕಾಗಿ ಹೋರಾಟ ಮುಂದುವರಿಸುತ್ತೇವೆ” ಎಂದು ತಿಳಿಸಿದೆ.

2024ರ DUSU ಚುನಾವಣೆಯಲ್ಲಿ ಎನ್‌ಎಸ್‌ಯುಐ ಏಳು ವರ್ಷಗಳ ನಂತರ ಅಧ್ಯಕ್ಷ ಸ್ಥಾನವನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು. ಎಬಿವಿಪಿ ಆ ಸಮಯದಲ್ಲಿ ಉಪಾಧ್ಯಕ್ಷ ಸ್ಥಾನವನ್ನು ಪಡೆದು, ಕಾರ್ಯದರ್ಶಿ ಹುದ್ದೆಯನ್ನು ಉಳಿಸಿಕೊಂಡಿತ್ತು. ಈ ಬಾರಿ ಸುಮಾರು 40% ಮತದಾನ ದಾಖಲಾಗಿದ್ದು, ದಿಲ್ಲಿ ವಿಶ್ವವಿದ್ಯಾಲಯದ ಚುನಾವಣೆಗಳು ದಶಕಗಳಿಂದ “ಮಿನಿ ಲೋಕಸಭೆ” ಎಂದೇ ಖ್ಯಾತಿ ಪಡೆದಿವೆ. ಅರುಣ್ ಜೇಟ್ಲಿ, ಅಜಯ್ ಮಾಕನ್ ಸೇರಿದಂತೆ ಅನೇಕ ರಾಷ್ಟ್ರೀಯ ನಾಯಕರಿಗೆ DUSU ಚುನಾವಣೆಯೇ ರಾಜಕೀಯ ಪಯಣದ ಪ್ರಾರಂಭ ಆಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News