ʼಹೆಚ್ಚುವರಿ ಸಂಭಾವನೆ, ಸಿಬ್ಬಂದಿ ಬೇಡಿಕೆʼ: ಕಲ್ಕಿ ಸೀಕ್ವೆಲ್ ನಿಂದ ನಟಿ ದೀಪಿಕಾ ಪಡುಕೋಣೆ ಹೊರಕ್ಕೆ
ನಟಿ ದೀಪಿಕಾ ಪಡುಕೋಣೆ | PC : X
ಹೈದರಾಬಾದ್: ಬಹು ನಿರೀಕ್ಷಿತ ಕಲ್ಕಿ 2898 AD ಚಿತ್ರದ ಸೀಕ್ವೆಲ್ ನಲ್ಲಿ ನಟಿ ದೀಪಿಕಾ ಪಡುಕೋಣೆ ಭಾಗವಹಿಸುವುದಿಲ್ಲ ಎಂದು ವೈಜಯಂತಿ ಮೂವೀಸ್ ಗುರುವಾರ ಅಧಿಕೃತವಾಗಿ ಘೋಷಿಸಿದೆ.
“ದೀಪಿಕಾ ಪಡುಕೋಣೆ ಅವರಿಂದ ನಾವು ಕಲ್ಕಿ 2898 AD ಚಿತ್ರದ ಸೀಕ್ವೆಲ್ ನಿಂದ ಬೇರ್ಪಡುವ ನಿರ್ಧಾರಕ್ಕೆ ಬಂದಿದ್ದೇವೆ. ಮೊದಲ ಭಾಗದ ಕೆಲಸ ನೆನಪಿನಲ್ಲಿ ಉಳಿಯುವಂತದ್ದು, ಸೀಕ್ವೆಲ್‌ಗೆ ಅಗತ್ಯವಾದ ಬದ್ಧತೆ ಈ ಬಾರಿ ಸಾಧ್ಯವಾಗಲಿಲ್ಲ. ಅವರ ಮುಂದಿನ ಯೋಜನೆಗಳಿಗೆ ಶುಭ ಹಾರೈಸುತ್ತೇವೆ” ಎಂದು ಚಿತ್ರ ನಿರ್ಮಾಣ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಮೂಲಗಳ ಪ್ರಕಾರ, ದೀಪಿಕಾ ಪಡುಕೋಣೆ ಮುಂದಿಟ್ಟ ಷರತ್ತುಗಳೇ ಈ ನಿರ್ಧಾರಕ್ಕೆ ಕಾರಣವಾಗಿವೆ. ಮೊದಲ ಭಾಗದಲ್ಲಿ ಪಡೆದ ಸಂಭಾವನೆಗಿಂತ 25 ಶೇಕಡಾ ಹೆಚ್ಚುವರಿ ಶುಲ್ಕ, ದಿನಕ್ಕೆ ಕೇವಲ 7 ಗಂಟೆಗಳ ಶೂಟಿಂಗ್ ಮಿತಿ ಮತ್ತು ತಮ್ಮ 25 ಮಂದಿ ಸಿಬ್ಬಂದಿಗೆ 5-ಸ್ಟಾರ್ ಹೋಟೆಲ್ ವಾಸ್ತವ್ಯ ಒದಗಿಸಬೇಕೆಂದು ಅವರು ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ನಿರ್ಮಾಪಕರು ಬದಲಿ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಿದರೂ, ದೀಪಿಕಾ ಅದಕ್ಕೆ ಒಪ್ಪದೆ ನಿಂತರು. ಇದರಿಂದ ಚಿತ್ರ ನಿರ್ಮಾಣ ವೆಚ್ಚವು ಹೆಚ್ಚಾಗುವ ಆತಂಕ ವ್ಯಕ್ತವಾಯಿತು ಎಂದು ತಿಳಿದು ಬಂದಿದೆ.
ಇದಕ್ಕೂ ಮೊದಲು ದೀಪಿಕಾ, ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಸ್ಪಿರಿಟ್ ಚಿತ್ರದಿಂದಲೂ ಇದೇ ರೀತಿಯ ಕಾರಣಗಳಿಂದ ಹೊರಬಂದಿದ್ದರು. ಆಗ ಪ್ರಭಾಸ್ ಜೊತೆಗೆ ನಟಿಸಬೇಕಾಗಿದ್ದ ಆ ಚಿತ್ರದಲ್ಲಿ ಹೆಚ್ಚಿನ ಸಂಭಾವನೆ, ಕೆಲಸದ ಅವಧಿ ನಿರ್ಬಂಧ ಮತ್ತು ಲಾಭ ಹಂಚಿಕೆ ಕುರಿತ ಬೇಡಿಕೆಗಳನ್ನು ಅವರು ಮುಂದಿಟ್ಟಿದ್ದರು. ನಂತರ ಆ ಪಾತ್ರವನ್ನು ಅನಿಮಲ್ ಖ್ಯಾತಿಯ ತೃಪ್ತಿ ದಿಮ್ರಿ ನಿರ್ವಹಿಸಿದರು.
ಸೆಪ್ಟೆಂಬರ್‌ನಲ್ಲಿ ಪತಿ ನಟ ರಣವೀರ್ ಸಿಂಗ್ ಜೊತೆ ಮಗಳು ದುವಾ ಮೊದಲ ಹುಟ್ಟುಹಬ್ಬವನ್ನು ಆಚರಿಸಿದ ದೀಪಿಕಾ, ತಾಯ್ತನದ ನಂತರ ಜೀವನದ ಆದ್ಯತೆಗಳು ಬದಲಾಗಿರುವುದಾಗಿ ಹಂಚಿಕೊಂಡಿದ್ದರು. “ನನ್ನ ಮಗಳನ್ನು ಬಿಟ್ಟು ಹೊರಗೆ ಹೋಗಲು ಸಾಧ್ಯವಿಲ್ಲ. ನಿರ್ದೇಶಕರು ಬಯಸಿದರೆ ಮನೆಗೆ ಬರಬಹುದು” ಎಂದು ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದರು.
ಕಲ್ಕಿ 2898 AD ಸೀಕ್ವೆಲ್‌ನ ಪ್ರಮುಖ ಮಹಿಳಾ ಪಾತ್ರವನ್ನು ಈಗ ಯಾರು ನಿರ್ವಹಿಸಲಿದ್ದಾರೆ ಎಂಬ ಪ್ರಶ್ನೆಯತ್ತ ಸಿನಿರಂಗದ ಕಣ್ಣುಗಳು ನೆಟ್ಟಿವೆ.