ವಾಯುಪಡೆಗೆ 4 ಹರೊನ್ ಮಾರ್ಕ್ 2 ಡ್ರೋನ್ ಗಳ ಸೇರ್ಪಡೆ; ಸತತವಾಗಿ 36 ತಾಸು ಕಾರ್ಯಾಚರಿಸಬಲ್ಲ ಸಾಮರ್ಥ್ಯ
ಹೊಸದಿಲ್ಲಿ: ದಾಳಿ ಸಾಮರ್ಥ್ಯದ ಹಾಗೂ ಚೀನಾ, ಪಾಕ್ ಗಡಿಯುದ್ದಕ್ಕೂ ಕಣ್ಗಾವಲು ನಡೆಸಬಲ್ಲ ನಾಲ್ಕು ಅತ್ಯಾಧುನಿಕ ಹೆರೊನ್ ಮಾರ್ಕ್-2 ಡ್ರೋನ್ ಗಳು ರವಿವಾರ ಏಕಕಾಲದಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡಿವೆ.
ಈ ಡ್ರೋನ್ ಗಳನ್ನು ಉತ್ತರ ಸೆಕ್ಟರ್ನ ಗಡಿ ಮುಂಚೂಣಿ ವಾಯುನೆಲೆಯಲ್ಲಿ ನಿಯೋಜಿಸಲಾಗುವುದು ಎಂದು ವಾಯುಪಡೆ ಮೂಲಗಳು ತಿಳಿಸಿವೆ.
ಹೆರೊನ್ ಮಾರ್ಕ್ 2 ಡ್ರೋನ್ ಗಳು ಸುಮಾರು 36 ತಾಸುಗಳ ಕಾಲ ಗಗನದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿವೆ.
ಹೆರೊನ್ ಮಾರ್ಕ್ 2 ಡ್ರೋನ್ ಗಳ ಕಾರ್ಯನಿರ್ವಹಣೆ ಮಾಡುವ ಸ್ಕ್ವಾಡ್ರನ್ ಅನ್ನು ‘ವಾರ್ಡನ್ ಆಫ್ ನಾರ್ತ್’ ಎಂದು ಕರೆಯಲಾಗುತ್ತದೆ ಹಾಗೂ ಅವು ಚೀನಾ ಮತ್ತು ಪಾಕಿಸ್ತಾನದ ಎರಡೂ ಗಡಿಮುಂಚೂಣಿಗಳಲ್ಲಿ ಅವು ಕಣ್ಗಾವಲು ನಡೆಸಲಿವೆ. ಹೆರೊನ್ ಮಾರ್ಕ್-2 ಡ್ರೋನ್ ಗಳು
ಸಂವಹನ ಉಪಗ್ರಹಗಳೊಂದಿಗೆ ಸಂಪರ್ಕವನ್ನು ಹೊಂದಿವೆ ಹಾಗೂ ಭಾರತದ ಸಶಸ್ತ್ರ ಪಡೆಗಳಲ್ಲೇ ಅತ್ಯಂತ ಸುಧಾರಿತವಾದ ಡ್ರೋನ್ಗಳಾಗಿವೆ.
‘‘ಹೆರೊನ್ ಮಾರ್ಕ್ 2 ಅತ್ಯಂತ ಶಕ್ತವಾದ ಡ್ರೋನ್ ಆಗಿದೆ. ದೀರ್ಘ ಸಹಿಷ್ಣುತೆಯ ಸಾಮರ್ಥ್ಯದ ಈ ಡ್ರೋನ್ ಗಳು, ‘ವೀಕ್ಷಣಾ ರೇಖೆಯ ಆಚೆಗೂ ’ಕಾರ್ಯಾಚರಿಸಬಲ್ಲ ಈ ಡ್ರೋನ್ ಗಳ ಮೂಲಕ ಒಂದೇ ಸ್ಳಳದಿಂದ ಇಡೀ ದೇಶದ ಮೇಲೆ ಕಣ್ಗಾವಲು ನಡೆಸಬಹುದಾಗಿದೆ’’ ಎಂದು ಡ್ರೋನ್ ಸ್ಕ್ವಾಡ್ರನ್ ನ ಕಮಾಂಡಿಂಗ್ ಅಥಿಕಾರಿ ವಿಂಗ್ ಕಮಾಂಡರ್ ಪಂಕಜ್ ರಾಣಾ ತಿಳಿಸಿದ್ದಾರೆ.