ಭಾರತದ ಕೌಶಲ್ಯ ಕೊರತೆಗಳನ್ನು ನೀಗಿಸಲು ತುರ್ಕಿಯದ ಮಾದರಿ ಅಳವಡಿಸಿ: ನೀತಿ ಆಯೋಗದ ಆಗ್ರಹ
PC : NITI Aayog
ಹೊಸದಿಲ್ಲಿ: ದೇಶದ ಮಧ್ಯಮ ಉದ್ಯಮಗಳಲ್ಲಿಯ ಕೌಶಲ್ಯ ಕೊರತೆಗಳನ್ನು ನೀಗಿಸಲು ಭಾರತವು ಜಾಗತಿಕ ಅತ್ಯುತ್ತಮ ಪದ್ಧತಿಗಳನ್ನು ಅಳವಡಿಸಿಕೊಳ್ಳಬಹುದಾದ ದೇಶಗಳಲ್ಲಿ ತುರ್ಕಿಯ ಕೂಡ ಒಂದಾಗಿದೆ ಎಂದು ನೀತಿ ಆಯೋಗವು ಸೋಮವಾರ ಬಿಡುಗಡೆಗೊಳಿಸಿದ ವರದಿಯು ಉಲ್ಲೇಖಿಸಿದೆ.
‘ಮಧ್ಯಮ ಉದ್ಯಮಗಳಿಗಾಗಿ ನೀತಿ ವಿನ್ಯಾಸ’ ಶೀರ್ಷಿಕೆಯ ವರದಿಯು ಮಧ್ಯಮ ಉದ್ಯಮಗಳನ್ನು ಪ್ರೋತ್ಸಾಹಿಸಲು ತುರ್ಕಿಯದ ಜೊತೆಗೆ ಕೆನಡಾ,ಸಿಂಗಾಪುರ ಮತ್ತು ಆಸ್ಟ್ರೇಲಿಯಾದ ಕಾರ್ಯಕ್ರಮಗಳನ್ನು ಪಟ್ಟಿ ಮಾಡಿದೆ.
ತುರ್ಕಿಯದ ಏಔSಉಇಃ ಉದ್ಯಮಶೀಲತೆ ಕುರಿತು ದೂರ ತರಬೇತಿಯನ್ನು ಒದಗಿಸುತ್ತದೆ. ಇದು ಸಮಯ ಮತ್ತು ಸ್ಥಳದ ನಿರ್ಬಂಧಗಳಿಲ್ಲದೆ ಮಹಿಳೆಯರು,ಯುವಜನರು ಮತ್ತು ಅಂಗವಿಕಲ ಉದ್ಯಮಿಗಳಿಗೆ ಆದ್ಯತೆಯೊಂದಿಗೆ ಇ-ಅಕಾಡೆಮಿಯ ಸುಲಭ, ಪರಿಣಾಮಕಾರಿ ಮತ್ತು ಹೊಂದಿಸಿಕೊಳ್ಳಬಹುದಾದ ಉದ್ಯಮಶೀಲತೆ ತರಬೇತಿಯಾಗಿದೆ ಎಂದು ಹೇಳಿರುವ ವರದಿಯು, ತುರ್ಕಿಯದ ಇ-ಅಕಾಡೆಮಿಯು ಆನ್‌ಲೈನ್ ತರಬೇತಿ ವೇದಿಕೆಯಾಗಿದ್ದು,ಸಬ್ಸಿಡಿ ದರಗಳಲ್ಲಿ ಕೋರ್ಸ್‌ಗಳನ್ನು ಒದಗಿಸುತ್ತದೆ ಮತ್ತು ದುರ್ಬಲ ಗುಂಪುಗಳಿಗೆ ಶುಲ್ಕರಹಿತವಾಗಿದೆ(ತುರ್ಕಿಯದ ಇ-ಅಕಾಡೆಮಿಯಲ್ಲಿ ಒದಗಿಸಿರುವಂತೆ) ಎಂದು ತಿಳಿಸಿದೆ.
ʼಆಪರೇಷನ್ ಸಿಂಧೂರ’ ಸಂದರ್ಭದಲ್ಲಿ ಪಾಕಿಸ್ತಾನವನ್ನು ಬೆಂಬಲಿಸಿದ್ದಕ್ಕಾಗಿ ತುರ್ಕಿಯ ಭಾರತದಲ್ಲಿ ಟೀಕೆಗಳನ್ನು ಎದುರಿಸುತ್ತಿದೆ.
ಜಾಗತೀಕರಣಗೊಂಡ ಮಾರುಕಟ್ಟೆಯಲ್ಲಿ ಮಧ್ಯಮ ಉದ್ಯಮಗಳು ಯಶಸ್ವಿಯಾಗಲು ಉದ್ಯಮಗಳ ಅಗತ್ಯಗಳಿಗೆ ಅನುಗುಣವಾದ ಹಾಗೂ ಸ್ಪರ್ಧಾತ್ಮಕ ಮತ್ತು ಕೌಶಲ್ಯಪೂರ್ಣ ಕಾರ್ಯಪಡೆಯನ್ನು ಖಚಿತಪಡಿಸುವ ಕೌಶಲ್ಯ ಅಭಿವೃದ್ಧಿಗೆ ದತ್ತಾಂಶ ಆಧಾರಿತ ವಿಧಾನದ ಸ್ಪಷ್ಟ ಅಗತ್ಯವಿದೆ ಎಂದು ವರದಿಯು ತಿಳಿಸಿದೆ.
ಮಧ್ಯಮ ಉದ್ಯಮಗಳು ಎದುರಿಸುತ್ತಿರುವ ಸವಾಲುಗಳನ್ನು ಬಗೆಹರಿಸಲು ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ಸಚಿವಾಲಯದ ಮೇಲ್ವಿಚಾರಣೆಯಡಿ ಉದ್ಯಮದ ವಹಿವಾಟಿಗೆ ಅನುಗುಣವಾಗಿ ದುಡಿಯುವ ಬಂಡವಾಳ ನೆರವು ಯೋಜನೆ, ಮಾರುಕಟ್ಟೆ ದರಗಳಲ್ಲಿ ಐದು ಕೋ.ರೂ.ಗಳ ಕ್ರೆಡಿಟ್ ಕಾರ್ಡ್ ಸೌಲಭ್ಯ ಹಾಗೂ ರಿಟೇಲ್ ಬ್ಯಾಂಕ್‌ಗಳ ಮೂಲಕ ತ್ವರಿತ ನಿಧಿ ವಿತರಣೆ ಕಾರ್ಯವಿಧಾನಗಳನ್ನು ಪರಿಚಯಿಸುವಂತೆ ವರದಿಯು ಶಿಫಾರಸು ಮಾಡಿದೆ.
ಉದ್ಯಮ 4.0 ಪರಿಹಾರಗಳ ಅಳವಡಿಕೆಯನ್ನುಉತ್ತೇಜಿಸಲು ಅಸ್ತಿತ್ವದಲ್ಲಿರುವ ತಂತ್ರಜ್ಞಾನ ಕೇಂದ್ರಗಳನ್ನು ವಲಯ ನಿರ್ದಿಷ್ಟ ಮತ್ತು ಪ್ರಾದೇಶಿಕ ಅಗತ್ಯಕ್ಕನುಗುಣವಾಗಿ ರೂಪಿಸಿದ ಭಾರತ ಎಸ್‌ಎಂಇ 4.0 ದಕ್ಷತೆ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸುವಂತೆಯೂ ವರದಿಯು ಸೂಚಿಸಿದೆ.
ರಾಷ್ಟ್ರೀಯ ಮಹತ್ವದ ಕ್ಲಸ್ಟರ್ ಆಧಾರಿತ ಯೋಜನೆಗಳಿಗೆ ಸ್ವಾವಲಂಬಿ ಭಾರತ ನಿಧಿಯನ್ನು ಬಳಸಿಕೊಂಡು ಎಂಎಸ್‌ಎಂಇ ಸಚಿವಾಲಯದಲ್ಲಿ ಈ ಉದ್ಯಮಗಳಿಗಾಗಿಯೇ ಮೀಸಲಾದ ಸಂಶೋಧನೆ ಮತ್ತು ಅಭಿವೃದ್ಧಿ ಕೋಶವನ್ನು ಸ್ಥಾಪಿಸುವಂತೆಯೂ ನೀತಿ ಆಯೋಗವು ಶಿಫಾರಸು ಮಾಡಿದೆ.
ಭಾರತದ ಜಿಡಿಪಿಗೆ ಸುಮಾರು ಶೇ.29ರಷ್ಟು ಕೊಡುಗೆ ನೀಡುತ್ತಿರುವ ಎಂಎಸ್‌ಎಂಇ ವಲಯವು ರಫ್ತಿನಲ್ಲಿ ಶೇ.40ರಷ್ಟು ಪಾಲನ್ನು ಹೊಂದಿದೆ ಮತ್ತು ಕಾರ್ಯಪಡೆಯ ಶೇ.60ಕ್ಕೂ ಅಧಿಕ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ.
ಅದರ ನಿರ್ಣಾಯಕ ಪಾತ್ರದ ಹೊರತಾಗಿಯೂ ಎಂಎಸ್‌ಎಂಇ ವಲಯವು ಅಸಮಾನ ಸಂಯೋಜನೆಯನ್ನು ಹೊಂದಿದೆ. ನೋಂದಾಯಿತ ಎಂಎಸ್‌ಎಂಇಗಳ ಪೈಕಿ ಶೇ.97ರಷ್ಟು ಕಿರು ಉದ್ಯಮ ಮತ್ತು ಶೇ.2.7ರಷ್ಟು ಸಣ್ಣ ಉದ್ಯಮಗಳಾಗಿದ್ದು, ಕೇವಲ ಶೇ.0.3ರಷ್ಟು ಮಧ್ಯಮ ಉದ್ಯಮಗಳಾಗಿವೆ. ಆದಾಗ್ಯೂ ಮಧ್ಯಮ ಉದ್ಯಮಗಳು ಎಂಎಸ್‌ಎಂಇ ರಫ್ತುಗಳಲ್ಲಿ ಶೇ.40ರಷ್ಟು ಪಾಲನ್ನು ಹೊಂದಿವೆ ಮತ್ತು ಇದು ಇನ್ನೂ ಬಳಕೆಯಾಗದ ಅವುಗಳ ಅಪಾರ ಸಾಮರ್ಥ್ಯವನ್ನು ತೋರಿಸುತ್ತದೆ.