‘ದಿ ಬಾಸ್ಟರ್ಡ್ಸ್ ಆಫ್ ಬಾಲಿವುಡ್’ ವಿವಾದ: ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ ಸಮೀರ್ ವಾಂಖೆಡೆ
Photo| NDTV
ಹೊಸದಿಲ್ಲಿ: ‘ದಿ ಬಾಸ್ಟರ್ಡ್ಸ್ ಆಫ್ ಬಾಲಿವುಡ್’ ವೆಬ್ ಸೀರೀಸ್ ವಿರುದ್ಧ ಮುಂಬೈನ ಸಿವಿಲ್ ನ್ಯಾಯಾಲಯವೊಂದರಲ್ಲಿ ಮೊಕದ್ದಮೆ ಹೂಡಲು ಮಾಜಿ ಐಆರ್‌ಎಸ್ ಅಧಿಕಾರಿ ಸಮೀರ್ ವಾಂಖೆಡೆ ಅವರಿಗೆ ಮಂಗಳವಾರ ದಿಲ್ಲಿ ಹೈಕೋರ್ಟ್ ಅನುಮತಿ ನೀಡಿದೆ.
ಸಮೀರ್ ವಾಂಖೆಡೆಗೆ ಮುಂಬೈ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಅನುಮತಿ ನೀಡಿದ ನ್ಯಾ. ವಿಕಾಸ್ ಮಹಾಜನ್ ಅವರ ನ್ಯಾಯಪೀಠ, ಫೆಬ್ರವರಿ 12ರಂದು ಎಲ್ಲ ಪ್ರತಿವಾದಿಗಳೂ ಮಲಾಡ್‌ನ ದಿಂಡೋಶಿಯ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಎದುರು ಹಾಜರಾಗಬೇಕು ಎಂದು ನಿರ್ದೇಶನ ನೀಡಿದೆ. ಮುಂಬೈನಲ್ಲಿ ನಡೆಯಲಿರುವ ವಿಚಾರಣೆಗೆ ತನ್ನ ಆದೇಶವನ್ನು ಎಲ್ಲ ಪ್ರತಿವಾದಿಗಳಿಗೆ ಸಮನ್ಸ್ ಆಗಿ ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.
ಶಾರೂಖ್ ಖಾನ್ ಮಾಲಕತ್ವದ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ನಿರ್ಮಿಸಿರುವ ಹಾಗೂ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ‘ದಿ ಬಾಸ್ಟರ್ಡ್ಸ್ ಆಫ್ ಬಾಲಿವುಡ್’ ವೆಬ್ ಸೀರೀಸ್ ತಮ್ಮ ವಿರುದ್ಧ ಅವಹೇಳನಕಾರಿ ತುಣುಕುಗಳನ್ನು ಒಳಗೊಂಡಿದೆ ಎಂದು ಸಮೀರ್ ವಾಂಖೆಡೆ ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಈ ಪ್ರಕರಣದ ವಿಚಾರಣೆ ನಡೆಸುವುದು ತನ್ನ ವ್ಯಾಪ್ತಿಯಲ್ಲಿಲ್ಲ ಎಂದು ಜನವರಿ 29ರಂದು ಹೇಳಿದ್ದ ದಿಲ್ಲಿ ಹೈಕೋರ್ಟ್, ಈ ಅನುಮತಿ ನೀಡಿದೆ.