×
Ad

ಬೋಯಿಂಗ್ 787-8 ಡ್ರೀಮ್ ಲೈನರ್ ವಿಮಾನದ ಇಂಧನ ಸ್ವಿಚ್‌ಗಳು ತೃಪ್ತಿಕರ: ನಾಗರಿಕ ವಿಮಾನಯಾನ ಸಚಿವಾಲಯ

Update: 2026-02-04 09:58 IST
Photo| NDTV

ಹೊಸದಿಲ್ಲಿ: ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಹಾರಾಟ ನಿಲ್ಲಿಸಿದ ಬೋಯಿಂಗ್ 787-8 ಡ್ರೀಮ್ ಲೈನರ್ ವಿಮಾನದ ಎರಡೂ ಇಂಧನ ನಿಯಂತ್ರಣ ಸ್ವಿಚ್‌ಗಳು ತೃಪ್ತಿಕರವಾಗಿವೆ ಎಂದು ತಪಾಸಣೆಗಳು ತಿಳಿಸಿವೆ ಎಂದು ಮಂಗಳವಾರ ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ. ವಿಮಾನದ ಇಂಜಿನ್ ಚಾಲೂ ಆಗುವ ವೇಳೆ ಇಂಧನ ನಿಯಂತ್ರಣ ಸ್ವಿಚ್ ‘ರನ್’ ಸ್ಥಾನದಲ್ಲಿ ಸಮರ್ಪಕವಾಗಿ ತಾಳೆಯಾಗಿರಲಿಲ್ಲ ಎಂದು ಪೈಲಟ್ ವರದಿ ಮಾಡಿದ್ದ ಬೆನ್ನಿಗೇ ಸಚಿವಾಲಯದಿಂದ ಈ ಹೇಳಿಕೆ ಹೊರಬಿದ್ದಿದೆ.

ಬೋಯಿಂಗ್ 787-8 ಡ್ರೀಮ್ ಲೈನರ್ ವಿಮಾನದ ತಯಾರಿಕಾ ಸಂಸ್ಥೆಯ ಶಿಫಾರಸಿನ ಮೇರೆಗೆ ನಾಗರಿಕ ವಿಮಾನಯಾನ ಮಹಾನಿರ್ದೇಶಕರ ಉಪಸ್ಥಿತಿಯಲ್ಲಿ ಏರ್ ಇಂಡಿಯಾದ ಇಂಜಿನಿಯರಿಂಗ್ ತಂಡ ನಡೆಸಿದ ವಿಸ್ತೃತ ತಪಾಸಣೆಯಲ್ಲಿ ಕಂಡುಬಂದ ಅಂಶಗಳನ್ನು ಆಧರಿಸಿ ಸಚಿವಾಲಯ ಈ ಹೇಳಿಕೆ ಬಿಡುಗಡೆ ಮಾಡಿದೆ. ಇಂಧನ ನಿಯಂತ್ರಣ ಸ್ವಿಚ್ ಅನ್ನು ಅಸಮರ್ಪಕವಾಗಿ ನಿರ್ವಹಿಸಿದರೆ, ಸ್ವಿಚ್ ‘ರನ್’ ಹಾಗೂ ‘ಕಟ್ ಆಫ್’ ಸ್ಥಾನಗಳ ನಡುವೆ ಜಾರುವ ಸಾಧ್ಯತೆ ಇದೆ ಎಂದೂ ಸಚಿವಾಲಯ ಹೇಳಿದೆ.

ಜೂನ್ 2025ರಲ್ಲಿ ಅಹ್ಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 260 ಮಂದಿ ಮೃತಪಟ್ಟ ಬಳಿಕ ಈ ಸಮಸ್ಯೆಯ ತಪಾಸಣೆ ನಡೆಸಲಾಗಿತ್ತು. ವಿಮಾನವು ಮೇಲಕ್ಕೇರಿದ ಕೆಲವೇ ಕ್ಷಣಗಳಲ್ಲಿ ಇಂಧನ ನಿಯಂತ್ರಣ ಸ್ವಿಚ್ ‘ರನ್’ನಿಂದ ‘ಕಟ್ ಆಫ್’ಗೆ ಜಾರಿದ್ದರಿಂದ ಅದು ಅಪಘಾತಕ್ಕೀಡಾಗಿತ್ತು ಎಂಬ ಸಂಗತಿ ತನಿಖೆಯ ವೇಳೆ ಪತ್ತೆಯಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News