×
Ad

ಅದಾನಿ–ಲಿಯೊನಾರ್ಡೊ ಒಪ್ಪಂದ| ಹೊಸ ರೂಪದಲ್ಲಿ ಭಾರತಕ್ಕೆ ಮರಳಿದ ಕಪ್ಪುಪಟ್ಟಿಗೆ ಸೇರಿದ್ದ ಆಗಸ್ಟಾ ವೆಸ್ಟ್‌ಲ್ಯಾಂಡ್!

Update: 2026-02-04 10:09 IST
Photo| indiatoday

ಹೊಸದಿಲ್ಲಿ: ಭಾರತದ ಹೆಲಿಕಾಪ್ಟರ್ ತಯಾರಿಕಾ ಪರಿಸರವನ್ನು ಬಲಿಷ್ಠಗೊಳಿಸಲು ಅದಾನಿ ಡಿಫೆನ್ಸ್ ಆ್ಯಂಡ್ ಏರೋಸ್ಪೇಸ್ ಕಂಪೆನಿಯು ಇಟಲಿಯ ಲಿಯೊನಾರ್ಡೊ ಕಂಪೆನಿಯೊಂದಿಗೆ ವ್ಯೂಹಾತ್ಮಕ ಸಹಭಾಗಿತ್ವದ ಒಪ್ಪಂದ ಮಾಡಿಕೊಂಡಿದೆ.

ಭಾರತದಲ್ಲಿ ಪೂರ್ಣ ಪ್ರಮಾಣದ ಸಮಗ್ರ ಹೆಲಿಕಾಪ್ಟರ್ ಉತ್ಪಾದನಾ ನೆಲೆಯನ್ನು ಸ್ಥಾಪಿಸಲು, ಆ ಮೂಲಕ ಹೆಚ್ಚುತ್ತಿರುವ ಸೇನಾ ಅಗತ್ಯಗಳನ್ನು ಪೂರೈಸಲು ಹಾಗೂ ರಕ್ಷಣಾ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸುವ ದೇಶದ ಗುರಿಯತ್ತ ಮುನ್ನಡೆಯಲು ಈ ಸಹಭಾಗಿತ್ವಕ್ಕೆ ಬರಲಾಗಿದೆ ಎಂದು ಎರಡೂ ಕಂಪನಿಗಳು ಹೊಸದಿಲ್ಲಿಯಲ್ಲಿ ಪ್ರಕಟಿಸಿವೆ.

ಸಶಸ್ತ್ರ ಪಡೆಗಳ ಕಾರ್ಯಾಚರಣೆ ಅಗತ್ಯಗಳತ್ತ ಗಮನ ಹರಿಸಿರುವ ಈ ಸಹಭಾಗಿತ್ವ, ಈ ಹಿಂದೆ ಆಗಸ್ಟಾ ವೆಸ್ಟ್‌ಲ್ಯಾಂಡ್‌ನೊಂದಿಗೆ ಸಹಯೋಗ ಹೊಂದಿದ್ದ ಲಿಯೊನಾರ್ಡೊ ಕಂಪೆನಿಯ ಸುಧಾರಿತ ಎಡಬ್ಲ್ಯೂ169ಎಂ ಹಾಗೂ ಎಡಬ್ಲ್ಯೂ109 ಟ್ರೆಕ್ಕರ್ ಎಂ ಹೆಲಿಕಾಪ್ಟರ್‌ಗಳ ತಯಾರಿಕೆಗೆ ಬೆಂಬಲ ನೀಡಲಿದೆ. ಹಂತ ಹಂತವಾಗಿ ಸ್ವದೇಶೀಕರಣ, ಸಮಗ್ರ ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಪರೀಕ್ಷೆ ಸಾಮರ್ಥ್ಯಗಳನ್ನು ಹಾಗೂ ಪ್ರಾಯೋಗಿಕ ತರಬೇತಿ ಮೂಲಸೌಕರ್ಯಗಳನ್ನು ಈ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುತ್ತದೆ.

ಈ ಬೆಳವಣಿಗೆಯಿಂದ ಸದ್ಯ ಇಟಲಿಯ ಲಿಯೊನಾರ್ಡೊ ಅಡಿ ಕಾರ್ಯನಿರ್ವಹಿಸುತ್ತಿರುವ ಆಗಸ್ಟಾ ವೆಸ್ಟ್‌ಲ್ಯಾಂಡ್ ಭಾರತದ ರಕ್ಷಣಾ ವಲಯಕ್ಕೆ ಮರಳಿ ಬಂದಂತಾಗಿದೆ. ಕ್ಲೀನ್ ಚಿಟ್ ಪಡೆದ ಸುಮಾರು ಐದು ವರ್ಷಗಳ ಬಳಿಕ ಅದು ಭಾರತದ ರಕ್ಷಣಾ ವಲಯಕ್ಕೆ ಮರಳುತ್ತಿದೆ. ಭಾರತದಲ್ಲಿ ಈ ಹಿಂದೆ ಆಗಸ್ಟಾ ವೆಸ್ಟ್‌ಲ್ಯಾಂಡ್ ಕಂಪೆನಿ ವಿವಾದಕ್ಕೆ ಗುರಿಯಾಗಿದ್ದುದರಿಂದ, ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.

ವಿವಿಐಪಿ ಹೆಲಿಕಾಪ್ಟರ್ ಹಗರಣದಲ್ಲಿ ಆಗಸ್ಟಾ ವೆಸ್ಟ್‌ಲ್ಯಾಂಡ್ ಕಂಪೆನಿಯ ಹೆಸರು ಕೇಳಿ ಬಂದಿತ್ತು. ಈ ಹಗರಣವು 2010ರಲ್ಲಿ 12 ಎಡಬ್ಲ್ಯೂ–101 ಹೆಲಿಕಾಪ್ಟರ್ ಖರೀದಿಗೆ ಸಂಬಂಧಿಸಿದ್ದು, ಇದರ ಒಟ್ಟು ಮೊತ್ತ ಅಂದಾಜು 3,600 ಕೋಟಿ ರೂ. ಆಗಿತ್ತು. ಈ ಹೆಲಿಕಾಪ್ಟರ್‌ಗಳನ್ನು ಭಾರತದ ಉನ್ನತ ಸಂವಿಧಾನಿಕ ವ್ಯಕ್ತಿಗಳ ಬಳಕೆಗೆ ಖರೀದಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News