×
Ad

Madhya Pradesh | ಹೆಜ್ಜೇನು ದಾಳಿಯಿಂದ 20 ಮಕ್ಕಳನ್ನು ರಕ್ಷಿಸಿ ಜೀವತೆತ್ತ ಅಂಗನವಾಡಿ ಸಹಾಯಕಿ

Update: 2026-02-04 09:00 IST

PC: x.com/ndtv

ಭೋಪಾಲ್: ಹೆಜ್ಜೇನು ದಾಳಿಯಿಂದ 20 ಪುಟ್ಟ ಮಕ್ಕಳನ್ನು ರಕ್ಷಿಸಿ, ಜೇನುನೊಣ ಕಡಿತದಿಂದ ಗಂಭೀರ ಅಸ್ವಸ್ಥರಾಗಿದ್ದ ಅಂಗನವಾಡಿ ಸಹಾಯಕಿ ಕೊನೆಯುಸಿರೆಳೆದಿರುವ ಘಟನೆ ಮಧ್ಯಪ್ರದೇಶದ ನೀಮಚ್ ಜಿಲ್ಲೆಯಿಂದ ವರದಿಯಾಗಿದೆ.

ಮಾದವಾಡ ಪಂಚಾಯ್ತಿ ವ್ಯಾಪ್ತಿಯ ರಾಣಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಕ್ಕಳು ಆಟವಾಡುತ್ತಿದ್ದ ಆವರಣಕ್ಕೆ ದೊಡ್ಡ ಸಂಖ್ಯೆಯ ಜೇನುನೊಣಗಳ ಹಿಂಡು ದಾಳಿ ಇಟ್ಟಿತು. ಆ ಕ್ಷಣದಲ್ಲೇ ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಮಾಡುತ್ತಿದ್ದ ಕಾಂಚನ ಬಾಯಿ ಮೇಘ್ವಾಲ್ ತನ್ನ ಸುರಕ್ಷೆಯ ಬಗ್ಗೆ ಚಿಂತಿಸದೇ ಜೀವವನ್ನೇ ಪಣಕ್ಕಿಟ್ಟು, ಟರ್ಪಲ್ ಮತ್ತು ಪರದೆಯನ್ನು ತೆಗೆದುಕೊಂಡು ಪ್ರತಿ ಮಗುವನ್ನೂ ಸುತ್ತಿ ಜೇನುನೊಣಗಳ ದಾಳಿಯಿಂದ ರಕ್ಷಿಸಿದರು ಹಾಗೂ ಮಕ್ಕಳನ್ನು ಕೊಠಡಿಯ ಒಳಕ್ಕೆ ಕಳುಹಿಸಿದರು. ಮಕ್ಕಳು ಹಾಗೂ ಜೇನ್ನೊಣಗಳ ಹಿಂಡಿನ ನಡುವೆ ಸಿಕ್ಕಿಹಾಕಿಕೊಂಡ ಮಹಿಳೆಯ ಮೇಲೆ ಇಡೀ ಹಿಂಡು ದಾಳಿ ಮಾಡಿತು.

ನೂರಾರು ಜೇನುನೊಣಗಳು ಕಡಿಯುತ್ತಿದ್ದರೂ, ಕೊನೆಯ ಮಗುವನ್ನು ರಕ್ಷಿಸುವ ವರೆಗೂ ಅಲ್ಲಿಂದ ಕದಲದೇ ಧೈರ್ಯ ತೋರಿದರು. ಗ್ರಾಮಸ್ಥರು ನೆರವಿಗೆ ಧಾವಿಸುವ ವೇಳೆ ಕಾಂಚನ ಬಾಯಿ ಬಿದ್ದಿದ್ದರು. ಕೂಡಲೇಸಹಾಯಕಿಯನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದಯ್ದರೂ, ಅಲ್ಲಿಗೆ ತಲುಪುವ ವೇಳೆಗೆ ಆಕೆ ಮೃತಪಟ್ಟಿದ್ದಾಗಿ ವೈದ್ಯರು ಹೇಳಿದರು.  

ಅಂಗನವಾಡಿ ಕಾರ್ಯಕರ್ತೆಯಾಗಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನೂ ಸಿದ್ಧಪಡಿಸುತ್ತಿದ್ದ ಕಾಂಚನ ಬಾಯಿ ಅವರು ಜೈಮಾತಾ ದಿ ಸ್ವಸಹಾಯ ಗುಂಪಿನ ಅಧ್ಯಕ್ಷೆಯಾಗಿದ್ದರು.  ಕುಟುಂಬದ ಆಧಾರಸ್ತಂಭವಾಗಿ ಕಾರ್ಯನಿರ್ವಹಿಸುತ್ತಿದ್ದ ಕಾಂಚನ ಅವರು  ಪಾಶ್ರ್ವವಾಯುಪೀಡಿತರಾದ ಪತಿ ಶಿವಲಾಲ್, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News