ಸುಪ್ರೀಂ ಕೋರ್ಟ್‌ನಲ್ಲಿ ಇಂದು SIR ವಿಚಾರಣೆ: ಸ್ವತಃ ವಾದ ಮಂಡಿಸಲು ಅವಕಾಶ ನೀಡುವಂತೆ ಮಮತಾ ಬ್ಯಾನರ್ಜಿ ಮನವಿ
Photo| PTI
ಹೊಸದಿಲ್ಲಿ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ. ಈ ವೇಳೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನ್ಯಾಯಾಲಯದಲ್ಲಿ ಸ್ವತಃ ಹಾಜರಾಗುವ ನಿರೀಕ್ಷೆಯಿದೆ.
ಎಲ್‌ಎಲ್‌ಬಿ ಪದವೀಧರರಾಗಿರುವ ಮಮತಾ ಬ್ಯಾನರ್ಜಿ ಅವರು ಪ್ರಕರಣವನ್ನು ವೈಯಕ್ತಿಕವಾಗಿ ವಾದಿಸಲು ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಕಾನೂನು ತಂಡದ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ, ನೇರವಾಗಿ ವಾದ ಮಂಡಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಪಂಚೋಲಿ ಅವರನ್ನೊಳಗೊಂಡ ಪೀಠವು ಮಮತಾ ಬ್ಯಾನರ್ಜಿ, ತೃಣಮೂಲ ಕಾಂಗ್ರೆಸ್ ಸಂಸದರಾದ ಡೆರೆಕ್ ಓ’ಬ್ರೇನ್, ಡೋಲಾ ಸೇನ್ ಮತ್ತು ಇತರ ಅರ್ಜಿದಾರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಲಿದೆ.
ಸುಪ್ರೀಂ ಕೋರ್ಟ್ ಆವರಣ ಪ್ರವೇಶಕ್ಕೆ ಮಮತಾ ಬ್ಯಾನರ್ಜಿ ಅವರ ಹೆಸರಿನಲ್ಲಿ ಪಾಸ್ ನೀಡಲಾಗಿದೆ. ವಿಚಾರಣೆಯ ವೇಳೆ ಅವರ ಹಾಜರಾತಿ ಖಚಿತ ಎನ್ನಲಾಗುತ್ತಿದೆ.
ತಮ್ಮ ಅರ್ಜಿಯಲ್ಲಿ SIR ಪ್ರಕರಣದ ಸಂಗತಿಗಳ ಬಗ್ಗೆ ಸಂಪೂರ್ಣ ಪರಿಚಯವಿದ್ದು, ನ್ಯಾಯಾಲಯದ ಸಭ್ಯತೆ ಹಾಗೂ ಕ್ರಮಾನುಕ್ರಮಗಳನ್ನು ಪಾಲಿಸುವುದಾಗಿ ಮಮತಾ ತಿಳಿಸಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ SIR ಪ್ರಕ್ರಿಯೆಯಿಂದ ನಿವಾಸಿಗಳು ಎದುರಿಸುತ್ತಿರುವ ವಾಸ್ತವ ಪರಿಸ್ಥಿತಿಗಳ ಬಗ್ಗೆ ತಮಗೆ ನೇರ ಅರಿವು ಇದೆ ಎಂದು ಉಲ್ಲೇಖಿಸಿದ್ದಾರೆ.
ಇದಕ್ಕೂ ಮುನ್ನ, SIR ಪ್ರಕ್ರಿಯೆ ಕುರಿತಾಗಿ ಚುನಾವಣಾ ಆಯೋಗದೊಂದಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದ ಅವರು, ಪ್ರಜಾಪ್ರಭುತ್ವ ರಕ್ಷಣೆಗಾಗಿ “ಪ್ರತಿಯೊಂದು ಬಾಗಿಲನ್ನೂ ತಟ್ಟುತ್ತಿದ್ದೇನೆ” ಎಂದು ಹೇಳಿದ್ದರು. ನ್ಯಾಯಾಂಗವು ಸಂವಿಧಾನದ ಪ್ರಮುಖ ಆಧಾರಸ್ತಂಭವೆಂದು ಉಲ್ಲೇಖಿಸಿದ ಅವರು, ವಿಷಯವನ್ನು ಸಾರ್ವಜನಿಕ ಗಮನಕ್ಕೆ ತರುವ ಪ್ರಯತ್ನ ಮುಂದುವರಿಸಿದ್ದಾಗಿ ತಿಳಿಸಿದ್ದರು.