×
Ad

ಆಯಿಲ್ ಫಿಲ್ಟರ್‌ ನಲ್ಲಿ ದೋಷ; ಇಂದೋರ್ ನಲ್ಲಿ ಸುರಕ್ಷಿತವಾಗಿ ಇಳಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್

Update: 2025-09-05 20:01 IST

 ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ | PC : PTI 

ಇಂದೋರ್(ಮ.ಪ್ರ),ಸೆ.5: ಶುಕ್ರವಾರ 161 ಪ್ರಯಾಣಿಕರನ್ನು ಹೊತ್ತುಕೊಂಡು ದಿಲ್ಲಿಯಿಂದ ಇಂದೋರಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಇಂಜಿನ್‌ ನಲ್ಲಿ ದೋಷ ಕಾಣಿಸಿಕೊಂಡ ಬಳಿಕ ಪೈಲಟ್ ‘ಪ್ಯಾನ್-ಪ್ಯಾನ್’ ಕರೆಯನ್ನು ಮಾಡಿದ್ದು, ಆತಂಕದ ನಡುವೆಯೇ ವಿಮಾನವು 20 ನಿಮಿಷಗಳಷ್ಟು ವಿಳಂಬವಾಗಿ ತನ್ನ ಗಮ್ಯಸ್ಥಾನದಲ್ಲಿ ಸುರಕ್ಷಿತವಾಗಿ ಇಳಿದಿದೆ.

‘ಪ್ಯಾನ್-ಪ್ಯಾನ್’ ಸಮುದ್ರ ಮತ್ತು ವಾಯುಯಾನ ಸಂವಹನದಲ್ಲಿ ಜಾಗತಿಕವಾಗಿ ಗುರುತಿಸಲ್ಪಟ್ಟ ಸಂಕೇತವಾಗಿದ್ದು ನೆರವಿನ ಅಗತ್ಯವಿರುವ, ಆದರೆ ತಕ್ಷಣಕ್ಕೆ ಪ್ರಾಣಕ್ಕೆ ಅಪಾಯವಿಲ್ಲದ ತುರ್ತು ಸ್ಥಿತಿಯನ್ನು ಸೂಚಿಸುತ್ತದೆ. ಎಟಿಸಿ ಅಥವಾ ಗ್ರೌಂಡ್ ಸರ್ವಿಸ್‌ನಿಂದ ತ್ವರಿತ ಬೆಂಬಲದ ಅಗತ್ಯವಿದ್ದಾಗ ಪೈಲಟ್ ‘ಪ್ಯಾನ್-ಪ್ಯಾನ್’ ಕರೆಯನ್ನು ಮಾಡುತ್ತಾರೆ ಎಂದು ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

ವಿಮಾನವು ಇಲ್ಲಿಯ ದೇವಿ ಅಹಿಲ್ಯಾಬಾಯಿ ಹೋಳ್ಕರ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ. ಎಲ್ಲ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ.

‘ವಿಮಾನದ ಇಂಜಿನ್‌ಗಳಲ್ಲೊಂದರಲ್ಲಿ ತಾಂತ್ರಿಕ ದೋಷದ ಕುರಿತು ಮಾಹಿತಿ ಲಭಿಸಿದ ಬಳಿಕ ನಾವು ಎಲ್ಲ ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸಿದ್ದೆವು. ಬೆಳಿಗ್ಗೆ 9.35ಕ್ಕೆ ಇಲ್ಲಿ ಇಳಿಯಬೇಕಿದ್ದ ವಿಮಾನ 9.55ಕ್ಕೆ ಇಳಿದಿದೆ. ಪೈಲಟ್ ವಾಯು ಸಂಚಾರ ನಿಯಂತ್ರಣ (ಎಟಿಸಿ) ಕೊಠಡಿಗೆ ‘ಪ್ಯಾನ್-ಪ್ಯಾನ್’ ಸಂಕೇತ ರವಾನಿಸಿದ ಬಳಿಕ ಪ್ರಮಾಣಿತ ಕಾರ್ಯಾಚರಣೆ ವಿಧಾನಕ್ಕೆ ಅನುಗುಣವಾಗಿ ಅಗ್ನಿಶಾಮಕ ಮತ್ತು ವೈದ್ಯಕೀಯ ಬೆಂಬಲ ವ್ಯವಸ್ಥೆಗಳನ್ನು ಮಾಡಲಾಗಿತ್ತು’ ಎಂದು ಇಂದೋರ್ ವಿಮಾನ ನಿಲ್ದಾಣದ ನಿರ್ದೇಶಕ ವಿಪಿನ್ ಕಾಂತ್ ಸೇಠ್ ತಿಳಿಸಿದರು.

ಇಂದೋರಿನಲ್ಲಿ ವಿಮಾನ ಇಳಿಯುವಾಗ ಆಯಿಲ್ ಫಿಲ್ಟರ್ ದೋಷವು ಕಾಣಿಸಿಕೊಂಡಿದ್ದು, ಸಿಬ್ಬಂದಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರು. ಅದು ತುರ್ತು ಭೂಸ್ಪರ್ಶವಾಗಿರಲಿಲ್ಲ, ಆದರೆ ಪೈಲಟ್ ಆದ್ಯತೆಯ ಲ್ಯಾಂಡಿಂಗ್‌ ಗಾಗಿ ಎಟಿಸಿಯನ್ನು ಕೋರಿದ್ದರು ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ವಕ್ತಾರರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News