×
Ad

ವಾಯು ಮಾಲಿನ್ಯ ಬಿಕ್ಕಟ್ಟು ಈಗ ಮಿದುಳು, ಶರೀರಗಳ ಮೇಲಿನ ಪೂರ್ಣ ಪ್ರಮಾಣದ ದಾಳಿಯಾಗಿದೆ: ಕಾಂಗ್ರೆಸ್ ಕಳವಳ

Update: 2025-10-26 16:41 IST

ಸಾಂದರ್ಭಿಕ ಚಿತ್ರ | Photo Credit : PTI

ಹೊಸದಿಲ್ಲಿ: ಭಾರತದಲ್ಲಿ ಹದಗೆಡುತ್ತಿರುವ ವಾಯು ಮಾಲಿನ್ಯ ಬಿಕ್ಕಟ್ಟು ಕೇವಲ ಉಸಿರಾಟದ ಸಮಸ್ಯೆಯಾಗಿ ಉಳಿದಿಲ್ಲ,ಅದು ದೇಶದ ಮಿದುಳುಗಳು ಮತ್ತು ಶರೀರಗಳ ಮೇಲೆ ಪೂರ್ಣ ಪ್ರಮಾಣದ ದಾಳಿಯಾಗಿದೆ ಎಂದು ಕಾಂಗ್ರೆಸ್ ರವಿವಾರ ಕಳವಳ ವ್ಯಕ್ತಪಡಿಸಿದೆ.

ವಾಯು ಮಾಲಿನ್ಯವು ಸಾರ್ವಜನಿಕ ಆರೋಗ್ಯ ವಿಪತ್ತು ಮತ್ತು ರಾಷ್ಟ್ರೀಯ ಭದ್ರತಾ ಬೆದರಿಕೆಯಾಗಿದ್ದು,ಇದು ಭಾರತದ ಸಮಾಜ,ಆರೋಗ್ಯ ರಕ್ಷಣೆ ವ್ಯವಸ್ಥೆ ಮತ್ತು ಭವಿಷ್ಯದ ಕಾರ್ಯಪಡೆಯನ್ನು ಅಪಾಯದಲ್ಲಿ ಸಿಲುಕಿಸಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ(ಸಂವಹನ) ಜೈರಾಮ್ ರಮೇಶ ಅವರು ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಸ್ಟೇಟ್ ಆಫ್ ಗ್ಲೋಬಲ್ ಏರ್ 2025 ವರದಿಯನ್ನು ಉಲ್ಲೇಖಿಸಿರುವ ರಮೇಶ,ಭಾರತದಲ್ಲಿ ದಾಖಲಾದ ಸುಮಾರು 20 ಲಕ್ಷ ಸಾವುಗಳು ವಾಯುಮಾಲಿನ್ಯಕ್ಕೆ ಸಂಬಂಧಿಸಿದ್ದು,ಇದು 2000ರ ಬಳಿಕ ಶೇ.43ರಷ್ಟು ಹೆಚ್ಚಳವನ್ನು ಸೂಚಿಸುತ್ತಿದೆ. ಈ ಪೈಕಿ ಶೇ.90ರಷ್ಟು ಸಾವುಗಳು ಹೃದ್ರೋಗ,ಶ್ವಾಸಕೋಶ ಕ್ಯಾನ್ಸರ್,ಮಧುಮೇಹ ಮತ್ತು ಡಿಮೆನ್ಶಿಯಾ(ಬುದ್ಧಿಮಾಂದ್ಯತೆ)ದಂತಹ ಸಾಂಕ್ರಾಮಿಕವಲ್ಲದ ರೋಗಗಳಿಂದ ಸಂಭವಿಸಿವೆ. ಭಾರತದಲ್ಲಿ ಪ್ರತಿ ಒಂದು ಲಕ್ಷ ಜನರಿಗೆ ವಾಯುಮಾಲಿನ್ಯಕ್ಕ ಸಂಬಂಧಿಸಿದ 186 ಸಾವುಗಳು ಸಂಭವಿಸುತ್ತಿವೆ. ಇದು ಅಧಿಕ ಆದಾಯದ ದೇಶಗಳಿಗೆ ಹೋಲಿಸಿದರೆ 10 ಪಟ್ಟು ಅಧಿಕವಾಗಿದೆ ಎಂದು ಹೇಳಿದ್ದಾರೆ

ದೇಶದಲ್ಲಿ ದೀರ್ಘಕಾಲಿಕ ಪ್ರತಿರೋಧಕ ಶ್ವಾಸಕೋಶ ಕಾಯಿಲೆ(ಸಿಪಿಒಡಿ)ಯಿಂದ ಸಂಭವಿಸುವ ಸುಮಾರು ಶೇ.70ರಷ್ಟು, ಹೃದ್ರೋಗದಿಂದ ಉಂಟಾಗುವ ಶೇ.25ರಷ್ಟು ಮತ್ತು ಮಧುಮೇಹದಿಂದ ಸಂಭವಿಸುವ ಶೇ.20ರಷ್ಟು ಸಾವುಗಳಿಗೆ ವಾಯು ಮಾಲಿನ್ಯವು ಕಾರಣವಾಗಿದೆ.

ಸೂಕ್ಷ್ಮ ಕಣಗಳಿಗೆ(ಪಿಎಂ2.5) ಸುದೀರ್ಘ ಕಾಲ ಒಡ್ಡಿಕೊಳ್ಳುವುದಕ್ಕೂ ಮಿದುಳಿನ ಹಾನಿ ಮತ್ತು ಗ್ರಹಣ ಶಕ್ತಿ ಕುಸಿತಕ್ಕೂ ಈಗ ತಳುಕು ಹಾಕಲಾಗಿದ್ದು,ಜಾಗತಿಕವಾಗಿ ಸುಮಾರು 6,26,000 ಡಿಮೆನ್ಶಿಯಾ ಸಾವುಗಳು ವಾಯು ಮಾಲಿನ್ಯದೊಂದಿಗೆ ಗುರುತಿಸಿಕೊಂಡಿವೆ ಎಂದು ಎಚ್ಚರಿಕೆ ನೀಡಿರುವ ರಮೇಶ,ನಮ್ಮ ಪ್ರಸ್ತುತ ಪಿಎಂ2.5 ಮಟ್ಟವು ವಿಶ್ವ ಆರೋಗ್ಯ ಸಂಸ್ಥೆಯ ವಾರ್ಷಿಕ ಮಾರ್ಗಸೂಚಿಯಲ್ಲಿನ ಮಿತಿಗಿಂತ ಎಂಟು ಪಟ್ಟು ಅಧಿಕವಾಗಿದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮವನ್ನು(ಎನ್‌ಸಿಎಪಿ) 2017ರಲ್ಲಿಯೇ ಆರಂಭಿಸಲಾಗಿದ್ದರೂ ಪಿಎಂ2.5 ಮಟ್ಟವು ಹೆಚ್ಚುತ್ತಲೇ ಇದೆ ಮತ್ತು ಈಗ ಪ್ರತಿಯೊಬ್ಬ ಭಾರತೀಯನೂ ಡಬ್ಲ್ಯುಎಚ್‌ಒ ಮಿತಿಯನ್ನು ಮೀರಿರುವ ಪ್ರದೇಶದಲ್ಲಿ ವಾಸವಾಗಿದ್ದಾನೆ ಎಂದು ಹೇಳಿರುವ ಮಾಜಿ ಪರಿಸರ ಸಚಿವರೂ ಆಗಿರುವ ರಮೇಶ,ಸರಕಾರವು ಎನ್‌ಸಿಎಪಿಯನ್ನು ಆಮೂಲಾಗ್ರವಾಗಿ ಪರಿಷ್ಕರಿಸಬೇಕು ಮತ್ತು ರಾಷ್ಟ್ರೀಯ ವಾತಾವರಣ ವಾಯು ಗುಣಮಟ್ಟ ಮಾನದಂಡಗಳನ್ನು ನವೀಕರಿಸಬೇಕು ಎಂದು ಆಗ್ರಹಿಸಿದ್ದಾರೆ. ಇವುಗಳನ್ನು ಕೊನೆಯದಾಗಿ ನವಂಬರ್ 2009ರಲ್ಲಿ ಪರಿಷ್ಕರಿಸಲಾಗಿತ್ತು ಎಂದು ಅವರು ಬೆಟ್ಟು ಮಾಡಿದ್ದಾರೆ.

ಭಾರತ ವಾಯು ಮಾಲಿನ್ಯವು ಈಗ ಸಾರ್ವಜನಿಕ ಆರೋಗ್ಯ ಮತ್ತು ಉತ್ಪಾದಕತೆಯ ಮೇಲಿನ ದಾಳಿಯಾಗಿದೆ ಎಂದಿರುವ ಅವರು,ಕಾಟಾಚಾರದ ಕ್ರಮಗಳ ಸಮಯ ಮುಗಿದುಹೋಗಿದೆ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News