×
Ad

ಏರ್‌ಬಸ್ ವಿಮಾನಗಳಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ವಿಶ್ವಾದ್ಯಂತ ವಿಮಾನಯಾನಗಳು ಅಸ್ತವ್ಯಸ್ತ; ಏನಿದು ಇಎಲ್‌ಎಸಿ ಸಮಸ್ಯೆ?

ಇಎಲ್‌ಎಸಿ ಸಮಸ್ಯೆಯ ಪರಿಹಾರ ಹೇಗೆ?; ಇಲ್ಲಿದೆ ಮಾಹಿತಿ...

Update: 2025-11-29 16:38 IST

ಏರ್‌ಬಸ್ ಎ320 ವಿಮಾನ | Photo Credit ; NDTV 


ಹೊಸದಿಲ್ಲಿ: ಏರ್‌ಬಸ್ ಎ320 ವಿಮಾನಗಳನ್ನು ಕಾಡುತ್ತಿರುವ ಸಾಫ್ಟ್‌ವೇರ್ ಸಮಸ್ಯೆಯು ತುರ್ತು ನವೀಕರಣವನ್ನು ಅನಿವಾರ್ಯಗೊಳಿಸಿದ್ದು, ಇದರಿಂದಾಗಿ ವಾರಾಂತ್ಯದಲ್ಲಿ ಹಲವಾರು ವಿಮಾನಯಾನಗಳು ರದ್ದುಗೊಂಡಿವೆ ಮತ್ತು ವಿಳಂಬಗೊಂಡಿವೆ. ಹೀಗಾಗಿ ವಿಶ್ವಾದ್ಯಂತ ವಿಮಾನ ಪ್ರಯಾಣಿಕರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಈ ಸಮಸ್ಯೆಯು ಭಾರತದಲ್ಲಿ 200ಕ್ಕೂ ಅಧಿಕ ಇಂಡಿಗೋ, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳ ಮೇಲೆ ಪರಿಣಾಮವನ್ನು ಬೀರಿದೆ.

ಯುರೋಪ್‌ನ ಏರ್‌ಬಸ್ ಕಂಪನಿಯು ವ್ಯಾಪಕವಾಗಿ ಬಳಕೆಯಾಗುತ್ತಿರುವ ತನ್ನ 6,000 ಎ320 ಜೆಟ್ ವಿಮಾನಗಳ ತಕ್ಷಣ ದುರಸ್ತಿಗೆ ಆದೇಶಿಸುತ್ತಿರುವುದಾಗಿ ಶುಕ್ರವಾರ ತಿಳಿಸಿದೆ.

ಏರ್‌ಬಸ್‌ನ ಹೇಳಿಕೆಯ ಪ್ರಕಾರ ಇಎಲ್‌ಎಸಿ ಹಾರಾಟ ವ್ಯವಸ್ಥೆಯಲ್ಲಿ ಸಮಸ್ಯೆಯು ಕಂಡುಬಂದಿದೆ.

ಏನಿದು ಇಎಲ್‌ಎಸಿ?

ಎಲಿವೇಟರ್ ಆ್ಯಂಡ್ ಏಲರಾನ್ ಕಂಪ್ಯೂಟರ್ ಅಥವಾ ಇಎಲ್‌ಎಸಿ ಎಂದು ಕರೆಯಲ್ಪಡುವ ಹಾರಾಟ ವ್ಯವಸ್ಥೆಯನ್ನು ಹಾರಾಟ ನಿಯಂತ್ರಣಗಳಿಗಾಗಿ ಬಳಸಲಾಗುತ್ತದೆ. ಇಎಲ್‌ಎಸಿ ಪೈಲಟ್‌ನ ಸೈಡ್-ಸ್ಟಿಕ್‌ನಿಂದ ಹಿಂಭಾಗದಲ್ಲಿರುವ ಎಲಿವೇಟರ್‌ಗಳಿಗೆ ಆಜ್ಞೆಗಳನ್ನು ರವಾನಿಸುತ್ತದೆ. ಇವು ವಿಮಾನದ ಪಿಚ್ (ಮೇಲೆ ಅಥವಾ ಕೆಳಕ್ಕೆ ಚಲನೆ) ಅಥವಾ ಮೂಗಿನ ಕೋನವನ್ನು ನಿಯಂತ್ರಿಸುತ್ತವೆ.

ಸಮಸ್ಯೆ ಏನು?

ವಾಯುಯಾನದಲ್ಲಿ ತೀವ್ರವಾದ ಸೌರ ವಿಕಿರಣವು ವಿಮಾನದ ವಿದ್ಯುನ್ಮಾನ ವ್ಯವಸ್ಥೆಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಬಹುದು,ಇದು ಸಂಚರಣೆ ಮತ್ತು ಹಾರಾಟ ನಿಯಂತ್ರಣಕ್ಕೆ ಅಡ್ಡಿಯನ್ನುಂಟು ಮಾಡುವ ಸಾಧ್ಯತೆಯಿರುತ್ತದೆ. ಇತ್ತೀಚಿಗೆ ಏರ್‌ಬಸ್ ಎ320 ವಿಮಾನವೊಂದು ಹಾರಾಟದ ವೇಳೆ ದಿಢೀರ್ ಎತ್ತರವನ್ನು ಕಳೆದುಕೊಂಡ ಬಳಿಕ ಸೌರಜ್ವಾಲೆಗಳು ಹಾರಾಟ ನಿಯಂತ್ರಣಗಳ ಕಾರ್ಯ ನಿರ್ವಹಣೆಗೆ ನಿರ್ಣಾಯಕವಾದ ಡೇಟಾವನ್ನು ದೋಷಯುಕ್ತಗೊಳಿಬಹುದು ಎನ್ನುವುದು ಬಹಿರಂಗಗೊಂಡಿತ್ತು.

ಅ.30ರಂದು ಮೆಕ್ಸಿಕೋದ ಕಾನ್ಕನ್‌ನಿಂದ ನ್ಯೂಜೆರ್ಸಿಯ ನೆವಾರ್ಕ್‌ಗೆ ಪ್ರಯಾಣಿಸುತ್ತಿದ್ದ ಜೆಟ್‌ಬ್ಲ್ಯೂಗೆ ಸೇರಿದ ಎ320 ವಿಮಾನವು ಹಠಾತ್ ಎತ್ತರವನ್ನು ಕಳೆದುಕೊಂಡ ಬಳಿಕ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದರು. ಇದಾದ ಬಳಿಕ ಅದು ಫ್ಲೋರಿಡಾದ ಟಾಂಪಾದಲ್ಲಿ ತುರ್ತು ಭೂಸ್ಪರ್ಶವನ್ನು ಮಾಡಿತ್ತು.

ಶುಕ್ರವಾರ ತಡರಾತ್ರಿ ಯುರೋಪಿಯನ್ ಯೂನಿಯನ್ ಏವಿಯೇಶನ್ ಸೇಫ್ಟಿ ಏಜೆನ್ಸಿಯು (ಇಎಎಸ್‌ಎ) ವಿಮಾನಗಳು ಮುಂದಿನ ಹಾರಾಟವನ್ನು ನಡೆಸುವ ಮುನ್ನ ದೋಷವನ್ನು ನಿವಾರಿಸುವುದನ್ನು ಅಥವಾ ಸಾಫ್ಟ್‌ವೇರ್‌ನ್ನು ಮೇಲ್ದರ್ಜೆಗೇರಿಸುವುದನ್ನು ಕಡ್ಡಾಯಗೊಳಿಸಿ ತುರ್ತು ನಿರ್ದೇಶವನ್ನು ಹೊರಡಿಸಿದೆ.

ಮಾಧ್ಯಮ ವರದಿಗಳ ಪ್ರಕಾರ,ಸಾಫ್ಟ್‌ವೇರ್‌ನ್ನು ನಡೆಸುವ ಇಎಲ್‌ಎಸಿ ಬಿ ಹಾರ್ಡ್‌ವೇರ್ ಸೌರಜ್ವಾಲೆಗಳಿಂದ ಪ್ರಭಾವಿತಗೊಳ್ಳಬಹುದು ಎನ್ನುವುದನ್ನು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ. ಈ ಸಮಸ್ಯೆಯನ್ನು ಸರಿಪಡಿಸುವಲ್ಲಿ ವೈಫಲ್ಯವು ಎಲಿವೇಟರ್‌ಗಳ ಅನಿರೀಕ್ಷಿತ ಚಲನೆಗೆ ಕಾರಣವಾಗಬಹುದು ಮತ್ತು ವಿಮಾನವನ್ನು ಅದರ ರಚನಾತ್ಮಕ ಮಿತಿಗಳಾಚೆಗೆ ತಳ್ಳಬಹುದು.

ಇಎಲ್‌ಎಸಿ ಸಮಸ್ಯೆಯ ಪರಿಹಾರ ಹೇಗೆ?

ಪ್ರತಿಕೂಲ ಪರಿಣಾಮಕ್ಕೊಳಗಾಗಿರುವ ವಿಮಾನವು ಮುಂದಿನ ಹಾರಾಟವನ್ನು ನಿರ್ವಹಿಸುವ ಮುನ್ನ ದೋಷಪೂರಿತ ಇಎಲ್‌ಎಸಿಯನ್ನು ಬದಲಾಯಿಸುವ ಅಥವಾ ಮಾರ್ಪಡಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸಲು ಇಎಎಸ್‌ಎ ನಿರ್ದೇಶನವನ್ನು ನೀಡಿದೆ.

ಹಾರಾಟ ನಿಯಂತ್ರಣ ಸಾಫ್ಟ್‌ವೇರ್‌ನ್ನು ಹಿಂದಿನ,ಸ್ಥಿರ ಆವೃತ್ತಿಗೆ ಮರಳಿಸುವಂತೆ ಅಥವಾ ಪೀಡಿತ ಇಎಲ್‌ಎಸಿ ಹಾರ್ಡ್‌ವೇರ್‌ನ್ನು ಈಗಾಗಲೇ ಹಿಂದಿನ ಸಾಫ್ಟ್‌ವೇರ್‌ನ್ನು ಬಳಸುತ್ತಿರುವ ಘಟಕಗಳೊಂದಿಗೆ ಬದಲಿಸುವಂತೆ ವಿಮಾನಯಾನ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News