×
Ad

ವಿಲೀನಕ್ಕೆ NCP ಬಣಗಳ ಸಿದ್ಧತೆ; ಅಜಿತ್ ಪವಾರ್ ನಿಧನದಿಂದ ಪ್ರಕ್ರಿಯೆ ಮುಂದುವರಿಕೆ

ʼಮಹಾಯುತಿ ಸರ್ಕಾರʼ ಸೇರಲಿರುವ ಶರದ್ ಬಣ?

Update: 2026-01-30 18:22 IST

 ಅಜಿತ್ ಪವಾರ್ ,  ಶರದ್ ಪವಾರ್ | Photo Credit : PTI 

ಮುಂಬೈ: ನ್ಯಾಷನಲಿಷ್ಟ್ ಕಾಂಗ್ರೆಸ್ ಪಾರ್ಟಿ(NCP)ಯ ಎರಡು ಬಣಗಳು ವಿಲೀನವಾಗಲಿವೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿತ್ತು. ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಈ ರಾಜಕೀಯ ಬದಲಾವಣೆಗೆ ವೇದಿಕೆಯನ್ನೂ ಹುಟ್ಟುಹಾಕಿತ್ತು. ಅದರಂತೆ ಘೋಷಣೆಯನ್ನು ಫೆಬ್ರವರಿ 8ರಂದು ಪುನರ್ವಿಲೀನ ನಡೆಯಲಿದೆ ಎನ್ನಲಾಗುತ್ತಿತ್ತು. ಆದರೆ ಅಜಿತ್ ಪವಾರ್ ಅವರ ಅಕಾಲಿಕ ನಿಧನದಿಂದಾಗಿ ಈ ಪ್ರಕ್ರಿಯೆಯ ವಿಳಂಬವಾಗುವ ಸಾಧ್ಯತೆಯಿದೆ.

ವಿಲೀನ ಕುರಿತ ಮಾತುಕತೆಗಳು ನಿರ್ಣಾಯಕ ಹಂತದಲ್ಲಿದ್ದು, ಜಿಲ್ಲಾ ಪರಿಷತ್ ಚುನಾವಣಾ ಫಲಿತಾಂಶಗಳ ನಂತರ ಎರಡೂ ಬಣಗಳು ಔಪಚಾರಿಕ ಪುನರ್ವಿಲೀನಕ್ಕೆ ವೇದಿಕೆ ಸಿದ್ಧಪಡಿಸುತ್ತಿದ್ದವು. ವಿಮಾನ ದುರಂತದಲ್ಲಿ ಅಜಿತ್ ಪವಾರ್ ಮೃತಪಟ್ಟ ಹಿನ್ನೆಲೆಯಲ್ಲಿ ವಿಲೀನ ಘೋಷಣೆಯ ಸಮಯ ಮುಂದೂಡುವ ಸಾಧ್ಯತೆ ಇದೆ. ಆದರೂ, ವಿಲೀನ ಪ್ರಕ್ರಿಯೆ ಸ್ಥಗಿತಗೊಂಡಿಲ್ಲ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.

ಬುಧವಾರ ತಡರಾತ್ರಿ ಅಜಿತ್ ಪವಾರ್ ಅವರಿಗೆ ಗೌರವ ಸಲ್ಲಿಸಲು ಬಾರಾಮತಿಗೆ ಆಗಮಿಸಿದ್ದ ಹಿರಿಯ NCP ನಾಯಕರು ಸಭೆ ನಡೆಸಿದ್ದು, ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಯಲ್ಲಿ ಮುಂದಿನ ನಡೆ ಕುರಿತು ಸಮಾಲೋಚನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶರದ್ ಪವಾರ್ ನೇತೃತ್ವದ NCP (SP) ಬಣವು “ಸರ್ಕಾರಕ್ಕೆ ಸೇರುವ” ದಿಕ್ಕಿನಲ್ಲಿ ಪುನರ್ವಿಲೀನಕ್ಕೆ ಒಂದು ಹೆಜ್ಜೆಯಾಗಿ ಪರಿಗಣಿಸುತ್ತಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಅಜಿತ್ ಪವಾರ್ ನೇತೃತ್ವದ NCP ಬಣವು ಆಡಳಿತಾರೂಢ ಮಹಾಯುತಿ ಒಕ್ಕೂಟದ ಭಾಗವಾಗಿದ್ದು, NCP (SP) ಶಿವಸೇನೆ (UBT) ಹಾಗೂ ಕಾಂಗ್ರೆಸ್ ಒಳಗೊಂಡ ಮಹಾ ವಿಕಾಸ್ ಅಘಾಡಿಯ ಅಂಗವಾಗಿದೆ. ಎರಡು ಬಣಗಳ ನಡುವಿನ ಸಂವಹನಕ್ಕೆ ಅಜಿತ್ ಪವಾರ್ ಪ್ರಮುಖ ಕೊಂಡಿಯಾಗಿದ್ದರು. ಶರದ್ ಪವಾರ್ ನೇತೃತ್ವದ ಬಣದೊಂದಿಗೆ ಮಾತುಕತೆಗಳನ್ನು ಮುನ್ನಡೆಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಪಕ್ಷದ ನಾಯಕರು ಹೇಳಿದ್ದಾರೆ.

NCP (SP)ಯ ಹಿರಿಯ ಶಾಸಕ ಜಯಂತ್ ಪಾಟೀಲ್ ಹಾಗೂ ಪಕ್ಷದ ಮುಖ್ಯಸ್ಥ ಶಶಿಕಾಂತ್ ಶಿಂಧೆ, ವಿಲೀನದ ಚರ್ಚೆಗಳು ಮುಂದುವರಿದ ಹಂತದಲ್ಲಿವೆ ಎಂದು ದೃಢಪಡಿಸಿದ್ದಾರೆ. ಸಂಭಾವ್ಯ ಸಚಿವ ಸಂಪುಟ ಪುನರ್ರಚನೆ ಹಾಗೂ ಹೊಸ ಮುಖಗಳ ಸೇರ್ಪಡೆ ಕುರಿತು ಅನೌಪಚಾರಿಕ ಚರ್ಚೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.

“ಅಜಿತ್ ಪವಾರ್ ಅವರ ನಿಧನವು ನಮಗೆಲ್ಲರಿಗೂ ದೊಡ್ಡ ನಷ್ಟ. ಇತ್ತೀಚಿನ ದಿನಗಳಲ್ಲಿ ಎರಡೂ ಬಣಗಳ ನಾಯಕರು ನಿರಂತರವಾಗಿ ಭೇಟಿಯಾಗುತ್ತಿದ್ದರು. ಜನವರಿ 16ರಂದು ನನ್ನ ನಿವಾಸದಲ್ಲಿ ಸಭೆ ನಡೆಸಲಾಗಿತ್ತು. ಜನವರಿ 17ರಂದು ಶರದ್ ಪವಾರ್ ಅವರ ಮನೆಯಲ್ಲಿ ಮತ್ತೊಂದು ಸಭೆ ನಡೆಯಿತು,” ಎಂದು ಜಯಂತ್ ಪಾಟೀಲ್ ಹೇಳಿದ್ದಾರೆ.

ವಿಲೀನ ಮಾತುಕತೆಗಳು ಎರಡೂ ಬಣಗಳ ನಡುವಿನ ಹಿಂದಿನ ತಿಳುವಳಿಕೆಗಳಿಗೆ ಅನುಗುಣವಾಗಿಯೇ ಸಾಗುತ್ತಿವೆ ಎಂದು ಶಶಿಕಾಂತ್ ಶಿಂಧೆ ತಿಳಿಸಿದ್ದಾರೆ. “ಪುರಸಭೆ ಚುನಾವಣೆಯ ನಂತರ ವಿಲೀನದ ಬಗ್ಗೆ ಅಜಿತ್ ಪವಾರ್ ಹೇಳಿದ್ದರು. ಆ ನಿಟ್ಟಿನಲ್ಲಿ ಸಭೆಗಳೂ ನಡೆದಿವೆ. ಅವರ ನಿಧನದಿಂದ ಪ್ರಕ್ರಿಯೆ ವಿಳಂಬವಾಗಬಹುದು, ಆದರೆ ಮುಂದುವರಿಯಲಿದೆ,” ಎಂದು ಅವರು ಹೇಳಿದರು.

ಪುಣೆ ಹಾಗೂ ಪಿಂಪ್ರಿ–ಚಿಂಚ್ವಾಡ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎರಡೂ ಬಣಗಳು ಒಟ್ಟಿಗೆ ಸ್ಪರ್ಧಿಸಿದ ಬಳಿಕ, ಪುನರ್ವಿಲೀನದ ಚರ್ಚೆಗಳು ವೇಗ ಪಡೆದಿದ್ದವು. ಸಾರ್ವಜನಿಕವಾಗಿ ನಾಯಕರು ಮೃದು ನಿಲುವುಗಳನ್ನು ತಾಳಿದ್ದರೂ, ಆಂತರಿಕ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸುವ ಪ್ರಕ್ರಿಯೆ ಮುಂದುವರಿದಿದೆ ಎನ್ನಲಾಗಿದೆ.

ಮುಂಬರುವ ಜಿಲ್ಲಾ ಪರಿಷತ್ ಚುನಾವಣೆಯನ್ನು ಒಟ್ಟಾಗಿ ಎದುರಿಸುವ ಕುರಿತು ಸಹ ಚರ್ಚೆ ನಡೆದಿದ್ದು, ಫಲಿತಾಂಶಗಳ ನಂತರ ವಿಲೀನ ಘೋಷಿಸುವುದು ಕಾರ್ಯತಂತ್ರವಾಗಿತ್ತು. ಫೆಬ್ರವರಿ 8ನ್ನು ವಿಲೀನಕ್ಕೆ ತಾತ್ಕಾಲಿಕ ದಿನಾಂಕವಾಗಿ ಪರಿಗಣಿಸಲಾಗಿತ್ತು ಎಂದು NCP (SP) ನಾಯಕರೊಬ್ಬರು ತಿಳಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News