ಸತ್ಯಾಗ್ರಹದಲ್ಲಿ ‘ಇಂಕ್ವಿಲಾಬ್ ಝಿಂದಾಬಾದ್’ ಘೋಷಣೆ ಆರೋಪ
Photo: Twitter/ SabrangIndia
ಹೈದರಾಬಾದ್: ಸತ್ಯಾಗ್ರಹದಲ್ಲಿ ‘ಇಂಕ್ವಿಲಾಬ್ ಝಿಂದಾಬಾದ್’ ಘೋಷಣೆ ಕೂಗಿದ 17 ಮಂದಿ EFLU ಹೈದರಾಬಾದ್ ವಿದ್ಯಾರ್ಥಿಗಳ ವಿರುದ್ಧ ಇಂಗ್ಲಿಷ್ ಹಾಗೂ ವಿದೇಶಿ ಭಾಷಾ ವಿಶ್ವವಿದ್ಯಾಲಯ (EFLU) ರಿಜಿಸ್ಟ್ರಾರ್ ನರಸಿಂಹರಾವ್ ಕೇದಾರಿ ಸಲ್ಲಿಸಿರುವ ದೂರನ್ನು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಆಡಳಿತ ಮಂಡಳಿಯ ನಿರ್ಲಕ್ಷ್ಯ ಹಾಗೂ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದಿರುವ ಮಹಿಳಾ ವಿದ್ಯಾರ್ಥಿ ಮೇಲಿನ ಲೈಂಗಿಕ ದೌರ್ಜನ್ಯವನ್ನು ವಿರೋಧಿಸಿ ಕಳೆದ ಸುಮಾರು ಒಂದು ತಿಂಗಳಿನಿಂದ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಮೂರನೆಯ ಎಫ್‌ಐಆರ್ ಇದಾಗಿದೆ ಎಂದು thenewsminute.com ವರದಿ ಮಾಡಿದೆ.
“ಅವರ ನಡೆಸುತ್ತಿರುವ ಕೃತ್ಯಗಳಿಂದ ವಿಶ್ವವಿದ್ಯಾಲಯದ ಆವರಣದಲ್ಲಿ ಹಿಂಸಾಚಾರ ಜರುಗುವ ಸಾಧ‍್ಯತೆ ಇದೆ” ಎಂದು ದೂರಿನಲ್ಲಿ ಹೇಳಲಾಗಿದೆ. ಬರಹ, ಭಾವಚಿತ್ರ ಹೊಂದಿರುವ ಘೋಷಣೆಗಳು ಹಾಗೂ ಎಚ್ಚರಿಕೆಗಳು ಅವರು ವಿಶ್ವವಿದ್ಯಾಲಯ ಹಾಗೂ ಸರ್ಕಾರಕ್ಕೆ ಬೆದರಿಕೆ ಒಡ್ಡುತ್ತಿರುವುದಕ್ಕೆ ಸಾಕ್ಷಿಯಾಗಿವೆ ಎಂದೂ ಅವರು ಆರೋಪಿಸಿದ್ದಾರೆ.
ವಿದ್ಯಾರ್ಥಿಗಳು ‘ಇಂಕ್ವಿಲಾಬ್ ಝಿಂದಾಬಾದ್’ (ಕ್ರಾಂತಿ ಚಿರಾಯುವಾಗಲಿ), ‘ತುಮ್ ಝಮೀನ್ ಪೆ ಝುಲ್ಮ್ ಲಿಖೊ, ವಹಿ ಪೆ ಇಂಕ್ವಿಲಾಬ್ ಲಿಖಾ ಜಾಯೇಗಾ’ (ನೀವು ನೆಲದಲ್ಲಿ ದೌರ್ಜನ್ಯವನ್ನು ಬರೆಯಿರಿ, ನಾವಲ್ಲೇ ಕ್ರಾಂತಿಯನ್ನು ಬರೆಯುತ್ತೀವಿ) ಎಂಬ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗುತ್ತಿದ್ದಾರೆ ಎಂದೂ ರಿಜಿಸ್ಟ್ರಾರ್ ದೂರಿದ್ದಾರೆ. ವಿದ್ಯಾರ್ಥಿಗಳು ಈ ಘೋಷಣೆಗಳನ್ನು ವಿಶ್ವವಿದ್ಯಾಲಯದ ಮುಖ್ಯ ದ್ವಾರದಲ್ಲೇ ಕೂಗುತ್ತಿರುವುದು ನಮ್ಮ ಕಳವಳಕ್ಕೆ ಕಾರಣವಾಗಿದೆ ಎಂದೂ ಅವರು ಹೇಳಿದ್ದಾರೆ.
ಈ ಸಂಬಂಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಗಳಾದ 342 (ತಪ್ಪಾದ ನಿರ್ಬಂಧಕ್ಕೆ ಶಿಕ್ಷೆ), 506 (ಕ್ರಿಮಿನಲ್ ಬೆದರಿಕೆ) ಹಾಗೂ ತೆಲಂಗಾಣ ಸಾರ್ವಜನಿಕ ಪ್ರದೇಶಗಳಲ್ಲಿ ವಿಕೃತಿಯ ನಿಷೇಧ ಹಾಗೂ ಅಶ್ಲೀಲ ಮತ್ತು ಆಕ್ಷೇಪಾರ್ಹ ಭಿತ್ತಿಪತ್ರಗಳು ಹಾಗೂ ಜಾಹೀರಾತುಗಳ ನಿಷೇಧ ಕಾಯ್ದೆ, 1997ರ ಸೆಕ್ಷನ್ 4ರ ಅನ್ವಯ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 34 (ಸಾಮಾನ್ಯ ಉದ್ದೇಶದೊಂದಿಗೆ ಹಲವಾರು ಮಂದಿ ಆಕ್ಷೇಪಾರ್ಹ ಕೃತ್ಯಗಳಲ್ಲಿ ತೊಡಗುವುದು) ಅಡಿಯೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.