×
Ad

ಮತದಾರರ ಪಟ್ಟಿಯಲ್ಲಿ ಅಕ್ರಮ ಆರೋಪ | ಮಹಾ ವಿಕಾಸ ಅಘಾಡಿಯಿಂದ ಪ್ರತಿಭಟನಾ ರ‍್ಯಾಲಿ

Update: 2025-11-01 21:41 IST

Photo Credit : thehindu.com

ಮುಂಬೈ, ನ. 1: ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ಮತದಾರರ ಪಟ್ಟಿಯ ಅಕ್ರಮಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಮಹಾರಾಷ್ಟ್ರ ನವ ನಿರ್ಮಾಣ ಸೇನಾದೊಂದಿಗೆ ಮಹಾ ವಿಕಾಸ ಅಘಾಡಿ ಶನಿವಾರ ಪ್ರತಿಭಟನಾ ರ‍್ಯಾಲಿ ನಡೆಸಿತು.

ಬಹು ನಮೂದು, ತಪ್ಪಾಗಿ ಅಳಿಸುವಿಕೆ ಹಾಗೂ ಸೇರ್ಪಡೆಯಂತಹ ಮತದಾರರ ಪಟ್ಟಿಯ ಅಕ್ರಮಗಳ ಕುರಿತು ಭಾರತದ ಚುನಾವಣಾ ಆಯೋಗ (ಇಸಿಐ) ಕುರುಡಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ಈ ನ್ಯೂನತೆಗಳನ್ನು ಸರಿಪಡಿಸಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ.

ದಕ್ಷಿಣ ಮುಂಬೈಯ ಫ್ಯಾಶನ್ ಸ್ಟ್ರೀಟ್‌ ನಿಂದ ಅಪರಾಹ್ನ ಆರಂಭವಾದ ‘ಸತ್ಯಕ್ಕಾಗಿ ಮೆರವಣಿಗೆ’ ಕಿಲೋ ಮೀಟರ್ ಕ್ರಮಿಸಿ ಬಿಎಂಸಿ ಕೇಂದ್ರ ಕಚೇರಿಯ ಸಮೀಪ ಸಮಾಪನಗೊಂಡಿತು.

ಪ್ರತಿಭಟನಾ ರ‍್ಯಾಲಿಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಶಿವಸೇನಾ (ಯುಬಿಟಿ) ವರಿಷ್ಠ ಉದ್ಧವ್ ಠಾಕ್ರೆ, ಎನ್‌ಸಿಪಿ (ಎಸ್‌ಪಿ) ವರಿಷ್ಠ ಶರದ್ ಪವಾರ್, ಎಮ್‌ಎನ್‌ಎಸ್‌ನ ರಾಜ್ ಠಾಕ್ರೆ, ಕಾಂಗ್ರೆಸ್ ನಾಯಕ ಬಾಳಾ ಸಾಹೇಬ್ ಥೋರಾಟ್ ಹಾಗೂ ಇತರರು ಪಾಲ್ಗೊಂಡಿದ್ದರು.

ಪ್ರತಿಭಟನಾ ರ‍್ಯಾಲಿಯ ಸಮಾರೋಪದಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, ನನ್ನ ಹೆಸರನ್ನು ನಕಲಿ ಮೊಬೈಲ್‌ ನಿಂದ ‘ಸಕ್ಷಮ’ ಆ್ಯಪ್‌ ನಲ್ಲಿ ಅಪ್‌ ಲೋಡ್ ಮಾಡಲಾಗಿದೆ. ಮತದಾರರ ಪಟ್ಟಿಯಿಂದ ನನ್ನ ಹೆಸರನ್ನು ಅಳಿಸಲು ಈ ರೀತಿ ಮಾಡಿರುವ ಬಗ್ಗೆ ನನಗೆ ಅನುಮಾನ ಇದೆ ಎಂದರು.

‘ಶೋಲೆ’ ಚಲನಚಿತ್ರದ ಸಂಭಾಷಣೆಯೊಂದನ್ನು ಪುನರುಚ್ಚರಿಸಿದ ಅವರು ಬಿಜೆಪಿಯನ್ನು ಗುರಿಯಾಗಿರಿಸಿ ವಾಗ್ದಾಳಿ ನಡೆಸಲು ‘ಆನೆಕೊಂಡ’ ಹೇಳಿಕೆಯನ್ನು ಬಳಸಿದರು. ‘‘ನಾನು ನಿಮ್ಮೆಲ್ಲರಿಗೆ ಹೇಳುವುದೇನೆಂದರೆ, ಎಚ್ಚರವಾಗಿರಿ. ಇಲ್ಲದಿದ್ದರೆ ಆನೆಕೊಂಡ ಬರುತ್ತದೆ’’ ಎಂದು ಠಾಕ್ರೆ ಹೇಳಿದರು.

‘‘ನೀವು ನನ್ನ ಪಕ್ಷವನ್ನು ಕಳವುಗೈದಿರಿ, ನನ್ನ ಚಿಹ್ನೆಯನ್ನು ಕಳುವಗೈದಿರಿ ಹಾಗೂ ಈಗ ಮತಗಳನ್ನು ಕಳವುಗೈಯಲು ಬಯಸುತ್ತಿದ್ದೀರಿ’’ ಎಂದು ಬಿಜೆಪಿ ನೇತೃತ್ವದ ಆಡಳಿತದ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

ಎಂಎನ್‌ಎಸ್‌ ನ ರಾಜ್ ಠಾಕ್ರೆ ಮಾತನಾಡಿ, ಈ ವರ್ಷ ಜುಲೈವರೆಗೆ ಅಪ್‌ಲೋಡ್ ಮಾಡಲಾದ ಮತದಾರರ ಪಟ್ಟಿಯ ಪ್ರಕಾರ ಮುಂಬೈಯಲ್ಲಿ ಲಕ್ಷಾಂತರ ಮತದಾರರು ಎರಡು ಮತ ಹೊಂದಿದ್ದಾರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News